ದೊಡ್ಡ ಬನ್ನಿ ಮಹೋತ್ಸವ

ಹೊನ್ನಾಳಿ:

         ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಂಬು ಹೊಡೆಯುವುದರ ಮೂಲಕ ವಿಜೃಂಭಣೆಯಿಂದ ನೆರವೇರಿತು.

       ದಸರಾ ಹಬ್ಬದ ನಂತರದ ಶುಕ್ರವಾರ ಬನ್ನಿ ಮಹೋತ್ಸವ ಆಚರಿಸುವುದು ಈ ಕ್ಷೇತ್ರದ ವೈಶಿಷ್ಟ್ಯವಾಗಿದೆ. ಹೊನ್ನಾಳಿ ಪಟ್ಟಣ, ಮಾರಿಕೊಪ್ಪ, ಮಾದೇನಹಳ್ಳಿ, ಅರಬಗಟ್ಟೆ ಸೇರಿದಂತೆ ವಿವಿಧ ಗ್ರಾಮಗಳ ಮುತ್ತೈದೆಯರು, ಜೋಗಮ್ಮನವರು ಶುಕ್ರವಾರ ಮಧ್ಯಾಹ್ನದಿಂದಲೇ ಉಪವಾಸ ವ್ರತದಿಂದ ಇದ್ದು, ಬನ್ನಿ ಮುಡಿಯುವವರೆಗೂ ದೀಪಗಳನ್ನು ಹಿಡಿದು ಬೆಳಗುತ್ತಾರೆ.

       ಮಹಾನವಮಿ ಬನ್ನಿ ಮಹೋತ್ಸವ ನಡೆಯುವ ಸ್ಥಳಕ್ಕೆ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಜೊತೆಗೆ ಪ್ರಧಾನ ಅರ್ಚಕರಾದ ಮಲ್ಲಿಕಾರ್ಜುನ್ ಉಪವಾಸ ವ್ರತದೊಂದಿಗೆ ಶಮೀ ವೃಕ್ಷದ ಮುಂಭಾಗದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೂರು ಬಾಣ(ಅಂಬು)ಗಳನ್ನು ಹೊಡೆಯುತ್ತಾರೆ. ಬಾಣಗಳು ಯಾವ ದಿಕ್ಕಿಗೆ ಹೋಗುತ್ತವೆ ಎಂಬುದರ ಆಧಾರದ ಮೇಲೆ ಭಕ್ತರು ಮಳೆ-ಬೆಳೆ ಹಾಗೂ ರೈತರು-ನಾಡಿನ ಭವಿಷ್ಯವನ್ನು ಲೆಕ್ಕ ಹಾಕುವ ಪದ್ಧತಿ ಇದೆ. ನಂತರ ಭಕ್ತರು ಪರಸ್ಪರ ಬನ್ನಿ ಪತ್ರೆ ವಿನಿಮಯ ಮಾಡಿಕೊಳ್ಳುತ್ತಾರೆ. ಹತ್ತೂರು ಗ್ರಾಮ ಪಂಚಾಯ್ತಿ ಸದಸ್ಯರು, ಮಾರಿಕೊಪ್ಪ ಗ್ರಾಮಸ್ಥರು, ಹಿರಿಯರು ಹಾಗೂ ಯುವ ಮುಖಂಡರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link