ಹಾನಗಲ್ಲ :
ಹಾನಗಲ್ಲ ತಾಲೂಕು ಅಕ್ಕಿಆಲೂರು ಹೋಬಳಿ ವ್ಯಾಪ್ತಿಯ ಆಡೂರ ಗ್ರಾಮದಲ್ಲಿ ಕೃಷಿ ಇಲಾಖೆ ಹಾನಗಲ್ಲ ಮತ್ತು ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಇವರ ಸಹಯೋಗದೊಂದಿಗೆ ಏಕದಳ ಧಾನ್ಯ ಬೆಳೆಗಳಲ್ಲಿ ಸೈನಿಕ ಹುಳು ಹೊಸ ಪ್ರಭೇದ (ಸ್ಪೊಡೋಪ್ಟೆರಾ ಫ್ರೂಜಿಪೆರಡಾ) ಕೀಟದ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕೆಯನ್ನು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಉದ್ಘಾಟಿಸಿ ರೈತರಿಗೆ ಸಲಹೆ ನೀಡಿದರು.
ಆಡೂರಿನ ಮಂಜುನಾಥ ತಪ್ಪಲಾಪುರ ಅವರ ಕೃಷಿಭೂಮಿಯಲ್ಲಿ ನಡೆದ ಕೀಟದ ನಿರ್ವಹಣೆ ಪ್ರಾತ್ಯಕ್ಷಿಕೆ ಮಾತನಾಡಿದ ಅವರು, ಮೊಟ್ಟೆಯಿಂದ ಬಂದ ಮರಿಗಳು ಗುಂಪಿನಲ್ಲಿದ್ದು ಮೊದಲು ಮೊಟ್ಟೆಯ ಸಿಪ್ಪೆಯನ್ನೆ ತಿಂದು ಬದುಕುವವು. ತದನಂತರ ಗೋವಿನ ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಕೆರೆದು ತಿಂದು ಬದುಕುತ್ತವೆ.
ಇಂತಹ ಎಲೆಗಳು ಜಾಳು ಜಾಳಾಗಿದ್ದು ಅಸ್ಥಿಪಂಜರದಂತೆ ಗೋಚರಿಸಿ, ಎಲೆಗಳಲ್ಲಿ ದೊಡ್ಡ ದೊಡ್ಡ ಹಾಗೂ ಸಾಲಿನಲ್ಲಿರುವ ಕಿಡಕಿಗಳನ್ನು ಅಥವಾ ರಂಧ್ರಗಳನ್ನು ಕೊರೆಯುತ್ತದೆ. ಗೋವಿನ ಜೋಳದ ಬೆಳೆಯಲ್ಲಿ ಸಮಾನಾಂತರವಾಗಿ ಈ ರೀತಿಯ ರಂಧ್ರಗಳನ್ನು ಗಮನಿಸಿದರೆ ಆಕ್ರಮಣಕಾರಿ ಕೀಟವು ಒಳಗಡೆ ಇದೆ ಎಂದು ಭಾವಿಸಬೇಕು.
ಕೀಟದ ಬಾಧೆಯು ತೀವೃವಾದಲ್ಲಿ ಬೆಳೆಯುತ್ತಿರುವ ಸುಳಿಯನ್ನೇ ತಿಂದು ಹಾಕಿ ಬೆಳೆಗೆ ತೀವೃ ಹಾನಿ ಉಂಟು ಮಾಡಬಲ್ಲದು ಅಥವಾ ಸಸ್ಯವು ಸತ್ತು ಹೋಗುವುದು. ಕೀಡೆಗಳು ಬೆಳೆದಂತೆ ಹಾನಿಯ ಮಟ್ಟ ತೀವೃವಾಗುತ್ತದೆ. ಬೆಳೆದ ಕೀಡೆಗಳು ಒಂದನ್ನೊಂದು ತಿಂದು ಕೀಟಭಕ್ಷಕ ಪ್ರವೃತ್ತಿಯನ್ನು ತೋರುತ್ತವೆ. ಕೀಡೆಗಳು 6 ಹಂತಗಳನ್ನು ಸುಮಾರು 2 ರಿಂದ 3 ವಾರಗಳಲ್ಲಿ ಅಂದರೆ 14 ರಿಂದ 21 ದಿನಗಳಲ್ಲಿ ಪೂರೈಸಬಲ್ಲವು. ನಿರಂತರವಾಗಿ ಆಹಾರ ಭಕ್ಷಿಸುವ ಬೆಳೆದ ಕೀಡೆಗಳು ತಾವು ತಿನ್ನುವ ಆಹಾರವು ಖಾಲಿಯಾದ ತಕ್ಷಣ ಆಹಾರ ಅನ್ವೇಷಣೆಯಲ್ಲಿ ಒಂದು ಹೊಲದಿಂದ ಅಥವಾ ಗದ್ದೆಯಿಂದ ಮತ್ತೊಂದು ಗದ್ದೆಗೆ ಸೈನಿಕೋಪಾದಿಯಲ್ಲಿ ಪಸರಿಸುವ ಶಕ್ತಿಯನ್ನು ಹೊಂದಿವೆ.
ಕೀಟಗಳ ನಿರ್ವಹಣೆಗೆ ಪತಂಗಗಳ ಚಟುವಟಿಕೆಯನ್ನು ಬೆಳಕಿನ ಬಲೆ ಅಥವಾ ಲಿಂಗಾಕರ್ಷಕ ಬಲೆಗಳಿಂದ ಕಂಡುಕೊಳ್ಳಬಹುದು. ಈಗಾಗಲೇ ಕೀಟದ ಹಾನಿಯು ವರದಿಯಾಗಿರುವ ಜಿಲ್ಲೆಗಳಲ್ಲಿ ರೈತರು ಲ್ಯಾಮ್ದಾ ಸೈಹೆಲೋತ್ರಿನ್, 0.5 ಮಿ.ಲೀ., ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ 0.4 ಗ್ರಾಂ ಅಥವಾ ಕ್ಲೋರ್ಯಾಂಟ್ರಿನಿಲಿಪ್ರೊಲ್ 18.5 ಎಸ್.ಸಿ. 0.2 ಮಿ.ಲೀ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಿದಾಗ ಯಶಸ್ವಿ ನಿಯಂತ್ರಣ ಕಂಡುಬಂದಿರುವುದಾಗಿ ರೈತರು ಮಾಹಿತಿ ನೀಡಿರುತ್ತಾರೆ. ವಿಷಪಾಷಾಣ ತಯಾರಿಸುವ ವಿಧಾನ : ಪ್ರತಿ ಹೆಕ್ಟೇರಿಗೆ ಬೇಕಾಗುವ 50 ಕಿಲೋ ಭತ್ತ ಅಥವಾ ಗೋದಿಯ ತೌಡಿನ ಮೇಲೆ 5 ಲೀಟರ್ ನೀರಿನಲ್ಲಿ 250 ಮಿ.ಲೀ. ಮೊನೊಕ್ರೋಟೋಫಾಸ್ 36 ಎಸ್.ಎಲ್. ಕೀಟನಾಶಕವನ್ನು 2 ಕಿಲೋ ಗ್ರಾಂ ಬೆಲ್ಲದೊಂದಿಗೆ ಬೆರೆಸಿ ತೌಡಿನ ಮೇಲೆ ಸಿಂಪರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಪಾಷಾಣವನ್ನು ಒಂದರಿಂದ ಎರಡುದಿನ ಗೋಣಿ ಚೀಲದಲ್ಲಿ ಮುಚ್ಚಿಡಬೇಕು. ನಂತರ ಸಾಯಾಂಕಾಲದ ವೇಳೆ ಬೆಳೆಗಳ ಮೇಲೆ ವಿಷಪಾಷಾಣವನ್ನು ಎರಚಬೇಕು.
ಈ ಸಂದರ್ಭದಲ್ಲಿ ಮಾತನಾಡಿದ ಕಾಡಶೆಟ್ಟಿಹಳ್ಳಿಯ ರೈತ ಸಿದ್ದಲಿಂಗಪ್ಪ ದೊಡ್ಡಮನಿ, ಹಾನಗಲ್ಲಿನ ಕೃಷಿ ಇಲಾಖೆ ಬೆಳೆಗಳಿಗೆ ರೋಗ ಬಾಧೆ ಕಂಡಾ ಸಕಾಲಿಕವಾಗಿ ಸಲಹೆ ಮಾರ್ಗದರ್ಶನ ನೀಡಿ, ಸಹಾಯಧನದಲ್ಲಿ ಔಷಧಿಗಳನ್ನು ನೀಡಿದೆ. ಇದರಿಂದ ರೈತರಿಗೆ ಬಹು ಉಪಯೋಗವಾಗಿದೆ. ಕೃಷಿ ಇಲಾಖೆ ಸಕಾಲಿಕವಾಗಿ ರೈತರ ಸಹಾಯಕ್ಕೆ ನಿಲ್ಲಬೇಕು ಎಂದರು.
ವರ್ದಿ ಗ್ರಾಮದ ರೈತ ಸೋಮಶೇಖರ ಸಣ್ಣಕ್ಕನವರ ಮಾತನಾಡಿ, ಕೃಷಿ ಇಲಾಖೆಯೊಂದಿಗೆ ರೈತರು ನಿರಂತರ ಸಂಪರ್ಕ ಹೊಂದಿರಬೇಕು. ಸರಕಾರದ ಯೋಜನೆಗಳು, ಸಹಾಯಧನದ ಮೂಲಕ ಲಭ್ಯವಾಗುವ ಯೋಜನೆಗಳನ್ನು ಪಡೆಯಬೇಕು. ರೈತರು ನಿಷ್ಕಾಳಜಿವಹಿಸಿದರೆ ಸೌಲಭ್ಯಗಳೂ ಸಿಗುವುದಿಲ್ಲ. ಇದರಿಂದ ನಾವು ಹಲವು ಯೋಜನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಕೋಟ್ :
ಹಿಂಗಾರು ಬೆಳೆಗಳಿಗೂ ಹಲವು ರೋಗ ಬಾಧೆ ಕಂಡುಬರುತ್ತಿದ್ದು, ರೈತರು ನಿಷ್ಕಾಳಜಿವಹಿಸತಕ್ಕದಲ್ಲ. ರೈತರು ಸಕಾಲಿಕವಾಗಿ ಔಷಧಿ ಸಿಂಪರಣೆ ಮಾಡಬೇಕು. ಕೃಷಿ ಇಲಾಖೆಯ ಎಲ್ಲ ಸಲಹೆಗಳನ್ನು ಪಡೆದು ಬೆಳೆ ಉಳಿಸಿಕೊಳ್ಳಬೇಕು. ರೈತರು ಕೃಷಿ ಇಲಾಖೆಯ ಸಂಪರ್ಕದಲ್ಲಿರುವುದು ಒಳ್ಳೆಯದು. . . . . . . . . . .ಸಂಗಮೇಶ ಹಕ್ಲಪ್ಪನವರ, ಕೃಷಿ ಅಧಿಕಾರಿ.
ಪ್ರಾತ್ಯಕ್ಷಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಶೋಕ, ಕೃಷಿ ವಿಜ್ಞಾನಿಗಳಾದ ಡಾ.ಗುಂಡಣ್ಣನವರ, ಡಾ|| ಕೃಷ್ಣನಾಯಕ, ಸಹಾಯಕ ಕೃಷಿ ನಿರ್ದೇಶಕ ವೈ.ಶ್ರೀಧರ, ಕೃಷಿ ಅಧಿಕಾರಿ ಶಿವಕುಮಾರ ಲಕ್ಷಶೆಟ್ಟಿ ಹಾಗೂ ನೂರಾರು ರೈತರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
