ಚಳ್ಳಕೆರೆ
ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಕುರುಡಿಹಳ್ಳಿ-ರಾಮಜೋಗಿಹಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕೊಲೆಯಾದ ಹಳೇಚೂರಿ ಪಾಪಯ್ಯನಹಟ್ಟಿಯ ಕುಕ್ಕಲ ತಿಪ್ಪೇಸ್ವಾಮಿ(45) ಶವವನ್ನು ಸೋಮವಾರ ಮಧ್ಯಾಹ್ನ ಜಿಲ್ಲಾ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದು ಶವಪರೀಕ್ಷೆ ನಡೆಸಲಾಯಿತು.
ತಾಲ್ಲೂಕಿನ ನಲಜಾಮನಹಟ್ಟಿಯ ಹುಲೇಬೋರಯ್ಯನ ಮಗ ಪಾಪಯ್ಯ(35) ಜಮೀನು ವಿವಾದಕ್ಕೆ ಸಂಬಂಧಪಟ್ಟದಂತೆ ಕುಕ್ಕಲ ತಿಪ್ಪೇಸ್ವಾಮಿಯನ್ನು ಕೈ ಮತ್ತು ಕಟ್ಟಿಗೆ ಯಿಂದ ಹೊಡೆದು ಅರಣ್ಯ ಪ್ರದೇಶದಲ್ಲಿ ಹೂತಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಹೂತಿದ್ದ ಶವವನ್ನು ಹೊರ ತೆಗೆದು ಶವ ಪರೀಕ್ಷೆ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದರು.
ಈ ಸಂಧರ್ಭದಲ್ಲಿ ಹಳೇಚೂರಿ ಪಾಪಯ್ಯನಹಟ್ಟಿಯಿಂದ ಮೃತ ಪತ್ನಿ ಸಣ್ಣಕ್ಕ, ಮಕ್ಕಳಾದ ಬೋರೇಶ್, ಪ್ರಮೀಣ್ ಹಾಗೂ ಬಂಧುಗಳು ಶವ ಹೊರ ತೆಗೆಯುವ ಸಂದರ್ಭದಲ್ಲಿ ಸ್ಥಳದಲ್ಲೇ ಹಾಜರಿದ್ದರು. ಈ ಸಂಧರ್ಭದಲ್ಲಿ ಶವವನ್ನು ಕಂಡು ಗೋಳಾಡಿದ ಮೃತ ಪತ್ನಿ ಸಣ್ಣಕ್ಕ, ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದು ಕೇವಲ ಒಬ್ಬ ವ್ಯಕ್ತಿಯ ಕೆಲಸವಲ್ಲ ಇದರ ಹಿಂದೆ ಇರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದಳು.
ಉಪವಿಭಾಗಾಧಿಕಾರಿ ವಿಜಯಕುಮಾರ್, ಸಣ್ಣಕ್ಕ ಮತ್ತು ಕುಟುಂಬ ವರ್ಗಕ್ಕೆ ಕೊಲೆಯ ಬಗ್ಗೆ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿರುತ್ತಾರೆ. ಸರ್ಕಾರದಿಂದ ಕಾನೂನು ರೀತ್ಯ ಸಿಗುವ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಗಂಡನ ಶವವನ್ನು ಕಂಡ ಸಣ್ಣಕ್ಕ ರೋಧಿಸುತ್ತಾ, ಜಮೀನಿನ ವಿವಾದ ಕೊಲೆಗೆ ಕಾರಣವಾದರೂ ಈ ಕೊಲೆ ನಡೆಸಲು ಸಂಚು ನಡೆಸಿದ ಮತ್ತು ಕೊಲೆಯ ಹಿಂದೆ ಇರುವ ಎಲ್ಲರನ್ನೂ ಬಂಧಿಸುವಂತೆ ಒತ್ತಾಯ ಪಡಿಸಿದಳು.
ಡಿವೈಎಸ್ಪಿ ಎಸ್.ರೋಷನ್ ಜಮೀರ್ ಪ್ರತಿಕ್ರಿಯಿಸಿ ಕುಕ್ಕಲ ತಿಪ್ಪೇಸ್ವಾಮಿ ಕೊಲೆಗೆ ಸಂಬಂಧಪಟ್ಟಂತೆ ಕ್ಷಿಪ್ರಗತಿಯಲ್ಲಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಿದೆ. ಅ.23ರಂದು ತುರುನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಅ.27ರಂದು ಸಿಕ್ಕ ತಲೆ ಬುರುಡೆ ಮತ್ತು ಸುಟ್ಟ ಬಟ್ಟೆಗಳ ಆಧಾರದ ಮೇಲೆ ಕೊಲೆಯಾದವನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಕೂಡಲೇ ಪೊಲೀಸರು ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸಿ ನಾಪತ್ತೆಯಾಗಿದ್ದ ಕೊಲೆ ಆರೋಪಿಯನ್ನು ಬಂಧಿಸಿ ಚಳ್ಳಕೆರೆಗೆ ಕರೆತಂದಿದ್ಧಾರೆ. ವಿಚಾರಣಾ ವೇಳೆಯಲ್ಲಿ ಆರೋಪಿ ಪಾಪಯ್ಯ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಕುಕ್ಕಲ ತಿಪ್ಪೇಸ್ವಾಮಿಗೆ ಆರ್ಥಿಕ ನೆರವು ನೀಡಿದ್ದು, ಅದಕ್ಕೆ ಬದಲಾಗಿ ಹಣ ಅಥವಾ ಜಮೀನು ನೀಡುವಂತೆ ಒತ್ತಾಯಿಸಿದ್ದು ಕುಕ್ಕಲ ತಿಪ್ಪೇಸ್ವಾಮಿ ನಿರಾಕರಿಸಿದ್ದೇ ಕೊಲೆ ಮಾಡಲು ಕಾರಣ ಎಂದು ಪೊಲೀಸರಿಗೆ ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾನೆ.
ಕೊಲೆ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿ ಭೇದಿಸಿ ಆರೋಪಿಯನ್ನು ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷಿಪ್ರ ಕಾರ್ಯಚರಣೆ ನಡೆಸಿದ ನಿವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮತ್ತು ಸಿಬ್ಬಂದಿ ವರ್ಗ ಪಿ.ಎಸ್.ಐ ಕೆ.ಸತೀಶ್‍ನಾಯ್ಕ ಮತ್ತು ಸಿಬ್ಬಂದಿ ವರ್ಗ ಹಾಗೂ ತುರುವನೂರು ಪೊಲೀಸ್ ಠಾಣೆ ಸಿಬ್ಬಂದಿ ವರ್ಗದ ಸಹಕಾರವನ್ನು ಡಿವೈಎಸ್ಪಿ ಪ್ರಶಂಸಿಸಿದ್ದು, ಜಿಲ್ಲಾರಕ್ಷಣಾಧಿಕಾರಿ ಡಾ.ಕೆ.ಅರುಣ್ ಸಹ ಈ ಪ್ರಕರಣವನ್ನು ಪತ್ತೆ ಹಚ್ಚಲು ನೆರವಾದ ಎಲ್ಲರನ್ನೂ ಅಭಿನಂದಿಸಿದ್ದಾರೆಂದು ತಿಳಿಸಿದ್ಧಾರೆ.
ತಹಶೀಲ್ದಾರ್ ಟಿ.ಸಿ.ಕಾಂತರಾಜು, ಡಾ.ವೇಣುಗೋಪಾಲ್, ಡಾ.ಮಂಜುನಾಥರೆಡ್ಡಿ, ತಾಲ್ಲೂಕು ಕಚೇರಿಯ ತಿಪ್ಫೇಸ್ವಾಮಿ, ಪ್ರಭಾರ ಗ್ರಾಮ ಲೆಕ್ಕಿಗ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








