ಚಿತ್ರದುರ್ಗ,
ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಿಲ್ಲ. ಇದರಿಂದ ಶಿಕ್ಷಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಹಾಗಾಗಿ ಕೂಡಲೇ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು. ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಿಂದ ಪ್ರಾರಂಭವಾದ ಮೆರವಣಿಗೆಯು ಬಿ.ಡಿ.ರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ವೃತ್ತವನ್ನು ತಲುಪಿ ಜಿಲ್ಲಾಡಳಿತಕ್ಕೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮಿತಿ ವರದಿ ಪಡೆದು ಕೂಡಲೇ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಮುಖ್ಯ ಶಿಕ್ಷಕರು ಹಾಗೂ ಬಡ್ತಿ ಹೊಂದುವವರಿಗೆ 10, 15, 20 ವರ್ಷಗಳ ಕಾಲಮಿತಿ ಬಡ್ತಿ ಹಾಗೂ ಆರ್ಥಿಕ ಸೌಲಭ್ಯ ನೀಡಬೇಕು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆದ ಶಿಕ್ಷಕರಿಗೆ ಗ್ರಾಮೀಣ ಕೃಪಾಂಕ ನೀಡಿದ್ದನ್ನು ಈ ಹಿಂದೆ ತೆಗೆದು ಹಾಕಲಾಗಿತ್ತು. ಈ ಕುರಿತು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು. ಶಿಕ್ಷಕರ ಸೇವಾವಧಿ ಪರಿಗಣಿಸಬೇಕೆಂದು ಆಗ್ರಹಪಡಿಸಿದರು.
ಶಿಕ್ಷಕರಿಗೆ ಪಠ್ಯ ಬೋಧನೆ ಜೊತೆಗೆ ಬಿಸಿಯೂಟ, ಬಿಎಲ್‍ಒ ಸಭೆಗೆ ಹಾಜರಾಗುವುದು, ಜನಗಣತಿ ಮಾಡುವುದು ಸೇರಿದಂತೆ ಬೇರೆ ಬೇರೆ ಕೆಲಸಗಳನ್ನು ವಹಿಸಲಾಗುತ್ತಿದೆ. ಇದರಿಂದ ಶಿಕ್ಷಕರಿಗೆ ಕೆಲಸದ ಒತ್ತಡವಾಗುತ್ತಿದ್ದು, ಮಕ್ಕಳಿಗೆ ಸಮರ್ಪಕವಾಗಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಿಕ್ಷಣೇತರ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದರು.
ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಿಲ್ಲ. ಇದರಿಂದ ಶಿಕ್ಷಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಹಾಗಾಗಿ ಕೂಡಲೇ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು. ಅಲ್ಲದೇ ಜೂನ್ ತಿಂಗಳಲ್ಲಿ ಮತ್ತೊಮ್ಮೆ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಅನೇಕ ಪದವೀಧರ ಶಿಕ್ಷಕರು ಹಾಗೂ ಇತರೆ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಬಡ್ತಿ ದೊರೆತಿಲ್ಲ. ಇದರಿಂದ ಶಿಕ್ಷಕರು ಬಡ್ತಿ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಡ್ತಿ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಶಿವಾನಂದ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಬಿ.ಮಹಂತೇಶ್, ತಾಲ್ಲೂಕು ಅಧ್ಯಕ್ಷ ಆರ್.ಕೃಷ್ಣಪ್ಪ, ಕಾರ್ಯದರ್ಶಿ ಕೆಂಚಪ್ಪ, ಗೋಪಾಲ್ ಮತ್ತಿತರರು ಶಿಕ್ಷಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
