ಹಾವೇರಿ:
ಭಾರತವನ್ನು ಸ್ವಾವಲಂಬಿ ತೈಲೋತ್ಪನ್ನ ರಾಷ್ಟ್ರವನ್ನಾಗಿ ಮಾಡಲು ಹಾಗೂ ಸ್ವತಃ ರೈತರೂ ಹೆಚ್ಚಿನ ಆದಾಯವನ್ನು ಗಳಿಸಿ ಸ್ವಾವಲಂಬಿ ಬದುಕನ್ನು ನಡೆಸುವುದಕ್ಕೆ, ಖರ್ಚು ಕಡಿಮೆ, ಹೆಚ್ಚು ಆದಾಯ ನೀಡುವ ತಾಳೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ರೈತರು ಮುಂದಾಗಬೇಕೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಮಂಗಳವಾರ ತಾಲೂಕಿನ ಚಿಕ್ಕನಿಂಗದಹಳ್ಳಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಪ್ರಗತಿ ಪರ ತಾಳೆ ಬೆಳೆಗಾರ ಮೊಹಿದ್ದೀನ ನದಾಫ್ ಅವರ ತಾಳೆ ತೋಟದಲ್ಲಿ, ತೋಟಗಾರಿಕೆ ಇಲಾಖೆ ಹಾಗೂ ಕಲ್ಪ ವೃಕ್ಷ ಆಯಿಲ್ ಫಾಮ್ ಕಂಪನಿ ಸಹಯೋಗದಲ್ಲಿ ಆಯೋಜಿಸಿದ್ದ ತಾಳೆ ಬೆಳೆ ವಿಚಾರ ಸಂಕೀರ್ಣ ಉದ್ಘಾಟಿಸಿ ಅವರು ಮಾತಮಾಡಿದರು.
ಆಹಾರೋತ್ಪಾದನೆಗಾಗಿ ಬಳೆಕೆ ಮಾಡಲಾಗುತ್ತಿರುವ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಂದ ಆಮದನ್ನು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ವಿದೇಶಿ ವಿನಿಮಯಕ್ಕೆ ಹೆಚ್ಚು ಹಣವನ್ನು ನೀಡಬೇಕಾಗಿದೆ. ಆಮದನ್ನು ತಪ್ಪಿಸುವುದಕ್ಕಾಗಿ ಇಲ್ಲಿನ ರೈತರು ತಾಳೆಯನ್ನು ಬೆಳೆಯುವತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕು. ತಾಳೆ ಬೆಳೆಗೆ ನಿರ್ವಹಣಾ ವೆಚ್ಚ ಕಡಿಮೆ ಇರುವದರಿಂದ ರೈತರಿಗೆ ಸಹಜವಾಗಿ ಆದಾಯ ಪ್ರಮಾಣವೂ ಹೆಚ್ಚಾಗಿ ರೈತರ ಆರ್ಥಿಕ ಮಟ್ಟದ ಸುಧಾರಿಸಿ ಸಾಲದ ಹೊರೆಯಿಂದ ಹೊರ ಬರುವದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್.ಪಿ.ಬೋಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಭಾರತದಲ್ಲಿ ತೆಂಗಿನ ನಂತರದಲ್ಲಿ ತಾಳೆಯನ್ನು ಕಲ್ಪ ವೃಕ್ಷ ಬೆಳೆ ಎಂದು ಕರೆಯಲಾಗುತ್ತಿದೆ. ಇದು ವಾಣಿಜ್ಯಕ ಬೆಳೆಯಾಗಿದೆ ಎಂದರು.
ಪ್ರಸಕ್ತ ಭಾರತದಲ್ಲಿ 200 ಲಕ್ಷ ಟನ್ ತಾಳೆ ಎಣ್ಣೆಯ ಬಳಕೆಯಾಗುತ್ತಿದೆ. ಇದರಲ್ಲಿ 50 ಲಕ್ಷ ಟನ್ ತಾಳೆಯನ್ನು ಮಾತ್ರ ಭಾರತದಲ್ಲಿ ಉತ್ಪಾದಿಸಲಾಗುತ್ತಿದ್ದರೆ. ಉಳಿದ 150 ಲಕ್ಷ ಟನ್ ತಾಳೆ ಎಣ್ಣೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ವಿದೇಶಿ ಆಮದನ್ನು ತಪ್ಪಿಸುವದಕ್ಕೆ ಕೇಂದ್ರ ಸರ್ಕಾರ ಭಾರತದಲ್ಲಿ ತಾಳೆ ಬೆಳೆಯನ್ನು ಬೆಳೆಯುವದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ತಿಳಿಸಿದರು.
ತಾಳೆ ಬೆಳೆಯುವದಕ್ಕೆ ಉಚಿತವಾಗಿ ಸಸಿಯನ್ನು, 3 ವರ್ಷಗಳ ಕಾಲ ನಿರ್ವಹಣೆ ಅರ್ಧ ಪ್ರಮಾಣದ ಗೊಬ್ಬರ, ಕೊಳವೆ ಬಾವಿ ಕೊರೆಸುವದಕ್ಕೆ ರೂ.25 ರಿಂದ 50 ಸಾವಿರ ವರೆಗೆ ಸಹಾಯ ಧನ, ವಿವಿಧ ಸಲಕರಣೆಗಳನ್ನು ಸಹಾಯ ಧನದಲ್ಲಿ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ಆಂದ್ರ ಪ್ರದೇಶ ಮತ್ತು ತಮಿಳು ನಾಡುಗಳಲ್ಲಿ ಪ್ರತಿ ಹೆಕ್ಟೇರಿಗೆ 45-50 ಟನ್ ತಾಳೆಯನ್ನು ತಗೆಯುತ್ತಿದ್ದರೆ ರಾಜ್ಯದಲ್ಲಿ ಕೇವಲ 20-25 ಟನ್ ತಾಳೆಯನ್ನು ಬೆಲೆಯುತ್ತಿದ್ದಾರೆ. ರಾಜ್ಯದ ರೈತರೂ ಸಹ ಹೆಚ್ಚಿನ ಇಳುವರಿಯನ್ನು ಪಡೆಯುವುದಕ್ಕೆ ಬೇಕಾದ ತಾಂತ್ರಿಕತೆ ಮತ್ತು ನಿಯಮಾನುಸಾರ ನಿರ್ವಹಣೆಗೆ ಆದ್ಯತೆಯನ್ನು ನೀಡಬೇಕೆಂದು ರೈತರಿಗೆ ಸಲಹೆ ನೀಡಿದರು.
ಪ್ರಸಕ್ತ ರಾಜ್ಯದಲ್ಲಿ ಸರ್ಕಾರದಿಂದ ದರ ನಿಗದಿಯಾಗಿರುವ ಏಕೈಕ ಬೆಳೆ ಎಂದರೆ ತಾಳೆ ಬೆಳೆ ಮಾತ್ರ. ಪ್ರಸಕ್ತ ಪ್ರತಿ ಟನ್ ತಾಳೆ ಹಣ್ಣಿಗೆ ರೂ.10,500(ಹತ್ತುವರೆ ಸಾವಿರ) ನಿಗದಿಯಾಗಿದೆ. ದರವನ್ನು ಸರ್ಕಾರದ ಪ್ರತಿನಿಧಿ, ರೈತ ಪ್ರತಿನಿಧ ಹಾಗೂ ತಾಳೆಣ್ಣೆ ತಗೆಯುವ ಕಾರ್ಖಾನೆಗಳ ಪ್ರತಿನಿಧಿಗಳು ಪ್ರತಿ ತಿಂಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳೆಯನ್ನು ಪರಿಗಣಿಸಿ ದರವನ್ನು ನಿಗದಿ ಮಾಡುತ್ತಾರೆ. ಈ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದರೆ ಹೆಚ್ಚಿನ ದರವನ್ನು ರೈತರಿಗೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ 600 ಹೆಕ್ಟೇರ ತಾಳೆಯನ್ನು ಬೆಳೆಯಲಾಗುತ್ತಿದ್ದು, ಇದರಲ್ಲಿ 150 ಹೆಕ್ಟೇರ ಪ್ರದೇಶದಲ್ಲಿ ಇಳುವರಿ ಪಡೆಯಲಾಗುತ್ತಿದೆ, ಜಿಲ್ಲೆಯ ರೈತರಲ್ಲಿ ಕೆಲವರು 15-20 ಟನ್ ಇಳುವರಿಯನ್ನು ತಗೆಯುತ್ತಿದ್ದು ಇಳುವರಿ ಪ್ರಮಾಣವನ್ನು ಹೆಚ್ಚಿಸುವದಕ್ಕೆ ಬೇಕಾದ ಕ್ರಮವನ್ನು ತಾಂತ್ರಿಕ ತಜ್ಞರು ನೀಡುವ ಸಲಹೆಯ ಮೇರೆಗೆ ರೈತರು ಬೆಳೆದರೆ ಅಧಿಕ ಇಳುವರಿಯನ್ನು ಪಡೆಯುವದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಪ್ರಗತಿ ಪರ ರೈತರಾದ ಮೊಹಿದ್ದೀನ ನದಾಫ್, ತಾಳೆ ಬೆಲೆ ನಿಗದಿ ಸಮೀತಿ ಸದಸ್ಯ ದಯಾನಂದ ಕಲಕೋಟಿ, ತಾಳೆ ಬೆಳೆಗಾರ ಕಾಡನಗೌಡ ರುದ್ರಗೌಡರ ಹಾಗೂ ಇತರರು ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ರಾಜಕುಮಾರ ಕಲ್ಲೇದೇವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಂಕ್ರಣ್ಣ ಮಾತನವರ, ಎಸ್.ವಿನೋದ್, ಡಾ.ಶಿವಕುಮಾರ, ಡಾ.ಟಿ.ಬಿ.ಅಲ್ಲೋಳಿ, ಡಾ.ಪ್ರಭುದೇವ ಅಜ್ಜಪ್ಪಳವರ, ಬಿ.ಎನ್.ಬರೇಗಾರ, ಕೆ.ಶಿವಣ್ಣ, ಹೆಚ್.ಹೆಚ್.ಭಜಂತ್ರಿ ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ