ಬಳ್ಳಾರಿ
ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಮತ ಏಣಿಕೆ ಪ್ರಕ್ರಿಯೆ ನಗರದ ರಾವ್ಬಹಾದ್ಧೂರ್ ಮಹಾಬಲೇಶ್ವರಪ್ಪ ಎಂಜನಿಯರಿಂಗ್ ಕಾಲೇಜಿನಲ್ಲಿ ನ.6ರಂದು ಬೆಳಗ್ಗೆ 8ರಿಂದ ಆರಂಭವಾಗಲಿದ್ದು, ಬೆಳಗ್ಗೆ 11ರವರೆಗೆ ಫಲಿತಾಂಶ ಲಭ್ಯವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
ನಗರದ ಆರ್ವೈಎಂಇಸಿ ಎಂಜನಿಯರಿಂಗ್ ಕಾಲೇಜಿನ ಜ್ಞಾನಕೇಂದ್ರದಲ್ಲಿ ನಿರ್ಮಿಸಲಾಗಿರುವ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧನಸಭಾ ಕ್ಷೇತ್ರಗಳ ಮತ ಏಣಿಕೆಯು 8 ಕೋಣೆಗಳಲ್ಲಿ ನಡೆಯಲಿದೆ. ಒಂದು ಕೊಠಡಿಯಲ್ಲಿ 15 ಟೇಬಲ್ಗಳಂತೆ ಒಟ್ಟು 120 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. 14ರಿಂದ 16 ಸುತ್ತುಗಳ ಮತ ಏಣಿಕೆಯಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ವಿವರಿಸಿದ ಡಿಸಿ ರಾಮ್ ಪ್ರಸಾತ್ ಮನೋಹರ್ ಅವರು, ಪ್ರತಿ ರೂಮಿನಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಮತಏಣಿಕೆ ಕಾರ್ಯ ಸೇರಿದಂತೆ ಈ ಕೌಂಟಿಂಗ್ ಕಾರ್ಯಕ್ಕೆ 500 ಜನರನ್ನು ನಿಯೋಜಿಸಲಾಗಿದೆ ಎಂದರು.
ವಿಕಲಚೇತನರಿಗೆ ಈ ಬಾರಿ ಚುನಾವಣಾ ಆಯೋಗದ ನಿರ್ದೇಶನದಂತೆ ಪಿಕ್ಅಪ್ಗಾಗಿ ವಾಹನದ ವ್ಯವಸ್ಥೆ ಮಾಡಿದ ಪರಿಣಾಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ 16300 ವಿಕಲಚೇತನರಲ್ಲಿ 10600 ವಿಕಲಚೇತನರು ಮತಚಲಾಯಿಸಿದ್ದಾರೆ ಮತ್ತು ಚುನಾವಣಾ ಆಯೋಗದ ಈ ವ್ಯವಸ್ಥೆಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಎಸ್ಪಿ ಅರುಣ ರಂಗರಾಜನ್ ಅವರು ಮಾತನಾಡಿ, ಮತ ಏಣಿಕೆ ವೇಳೆ ಅಹಿತಕರ ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. 5 ಕೆಎಸ್ಆರ್ಪಿ ತುಕಡಿ, ನಾಲ್ಕು ಡಿವೈಎಸ್ಪಿ, 14 ಸಿಪಿಐ, 26 ಪಿಎಸ್ಐ, 101ಎಎಸ್ಐ ಸೇರಿದಂತೆ ಪೊಲೀಸ್ ಪೇದೆ ಮತ್ತು ಗೃಹರಕ್ಷಕದಳದವರನ್ನು ನಿಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ಸಹಾಯಕ ಆಯುಕ್ತರುಗಳಾದ ರಮೇಶ ಕೊನರೆಡ್ಡಿ, ಪಿ.ಎನ್.ಲೋಕೇಶ ಇದ್ದರು.