ಬಳ್ಳಾರಿ :
ಇಡೀ ದೇಶವು ಚುನಾವಣೆಯಲ್ಲಿ ಮುಳುಗಿರುವ ಸಮಯದಲ್ಲಿ ಇತ್ತೀಚೆಗೆ ಅತ್ಯಂತ ಭಯಾನಕವಾಗಿ, ಸಂಶಯಾಸ್ಪದ ರೀತಿಯಲ್ಲಿ ದುರ್ಮರಣಕ್ಕೀಡಾದ ನಗರದ ಓರ್ವ ಇಂಜಿನೀಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅಸಹಜ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಅತ್ಯಂತ ದಾರುಣವಾದ ಪ್ರಕರಣವನ್ನು ಶೀಘ್ರವೇ ಭೇಧಿಸಿ, ದುರ್ಮರಣಕ್ಕೆ ಕಾರಣರಾದ ಅಪರಾಧಿಗಳಿಗೆ ಅತ್ಯಂತ ಉಗ್ರವಾದ ಹಾಗೂ ನಿದರ್ಶನೀಯವಾದ ಕಠಿಣ ಶಿಕ್ಷಯನ್ನು ವಿಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಐಎಂಎಸ್‍ಎಸ್, ಎಐಡಿಎಸ್‍ಓ, ಎಐಡಿವೈಓ ಸಂಘಟನೆಗಳು ಆಗ್ರಹಿಸುತ್ತವೆ.
ಅತ್ಯಂತ ಕ್ರೂರವಾಗಿ ಹತ್ಯೆಗೀಡಾಗಿರುವಳೆಂದೇ ಜನಜನಿತವಾಗಿರುವ ದಟ್ಟ ಅಭಿಪ್ರಾಯಕ್ಕೆ ಪೂರಕವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಜಿಲ್ಲೆಯಾದ್ಯಂತ, ಅಷ್ಟೇ ಅಲ್ಲ ರಾಜ್ಯದ ಮೂಲೆಮೂಲೆಗಳಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹೋರಾಟಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಚಳುವಳಿಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ವಿದ್ಯಾರ್ಥಿ,ಯುವಜನರು ಭಾಗವಹಿಸಿದ್ದರು. ಇದೀಗ ಶೀಘ್ರ ತನಿಖೆಯಾಗಿ ಮಧುವಿಗೆ ನ್ಯಾಯ ಸಿಗುವುದು ವಿಳಂಬವಾಗಬಾರದೆಂದು ವಿದ್ಯಾರ್ಥಿ, ಯುವಜನರು ಹಾಗೂ ಮಹಿಳೆಯರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.
ಈ ಘಟನೆಯಲ್ಲಿ ಮೇಲ್ನೋಟಕ್ಕೆ ಸಾಮಾನ್ಯ ಜನರೂ ಸಹ ಆತ್ಮಹತ್ಯೆಯಲ್ಲ, ಕೊಲೆ ಮಾಡಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದನ್ನು ಆರಂಭದಲ್ಲಿ ಒಂದು ಆತ್ಮಹತ್ಯೆ ಎಂಬಂತೆ ಬಿಂಬಿಸಲಾಯಿತು. ರಾಯಚೂರಿನ ಜನಗಳ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ಹೋರಾಟದ ಫಲವಾಗಿ ಅತ್ಯಾಚಾರ ಮತ್ತು ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆದ್ದರಿಂದ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಹಾಗೂ ಯಾವುದೇ ಪ್ರಭಾವಕ್ಕೊಳಗಾಗದೆ ತ್ವರಿತವಾಗಿ ಪ್ರಕರಣದ ತನಿಖೆ ನಡೆಸಬೇಕು ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್ ನೇಮಿಸಿ ಅತ್ಯಂತ ಶೀಘ್ರವಾಗಿ ಆರೋಪಿಗಳಿಗೆ ಅತ್ಯುಘ್ರ ಮತ್ತು ನಿದರ್ಶನೀಯ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತೇವೆ.
ಜೊತೆಗೆ ನಗರದಲ್ಲಿ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ವಿಶೇಷವಾಗಿ ಶೈಕ್ಷಣಿಕ ಪ್ರದೇಶಗಳಲ್ಲಿ, ವಸತಿ ನಿಲಯ ಸುತ್ತಮುತ್ತ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
