ಬಳ್ಳಾರಿ

ನಿವೃತ್ತಿ ಹೊಂದುವ ಸರ್ಕಾರಿ ನೌಕರರು 4 ತಿಂಗಳ ಮುಂಚಿತವಾಗಿ ಪಿಂಚಣಿಗೆ ಸಂಬಂಧಿತ ಮಾಹಿತಿಯನ್ನು ತಮ್ಮ ಇಲಾಖೆಗೆ ಸಲ್ಲಿಸಬೇಕು ಎಂದು ನಿವೃತ್ತ ಖಜಾನಾಧಿಕಾರಿ ಶ್ರೀಹರಿ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರರಂದು ನಗರದ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿಋಣ ನಿರ್ವಹಣೆ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಅದಾಲತ್‍ನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಿವೃತ್ತಿ ಹೊಂದಿರುವ ನೌಕರರು ತಾವು ನಿರ್ವಹಿಸುತ್ತಿರುವ ಇಲಾಖೆಗೆ 4 ತಿಂಗಳ ಮುಂಚಿತವಾಗಿ ಪಿಂಚಣಿಯ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರ ನಿಯಾಮಾವಳಿಗಳ ಪ್ರಕಾರ ಮುಂದಿನ ಕ್ರಮಕ್ಕೆ ಪಿಂಚಣಿಯ ಅರ್ಜಿಯನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ. ನಿವೃತ್ತಿ ಹೊಂದಿದ ದಿನದಂದು ಪಿಂಚಣಿದಾರರು ಪಿಂಚಣಿಯ ಬಗ್ಗೆ ಮಾಹಿತಿ ತಿಳಿಸಿದರು ಮುಂದಿನ ಕ್ರಮ ತೆಗೆದುಕೊಳ್ಳಲು ತಡವಾಗಬಹುದು ಅದಕ್ಕಾಗಿ ನಿವೃತ್ತಿ ಹೊಂದುವ ಪ್ರತಿಯೊಬ್ಬ ಸರ್ಕಾರಿ ನೌಕರರು 4 ತಿಂಗಳ ಮುಂಚಿತವಾಗಿ ಪಿಂಚಣಿ ವಿಷಯವನ್ನು ಮಹಾಲೇಖಪಾಲರಿಗೆ ಪ್ರಸ್ತಾಪ ಮಾಡಬೇಕು ಎಂದು ಅವರು ವಿವರಿಸಿದರು.
ನಿವೃತ್ತ ಸರ್ಕಾರಿ ನೌಕರರಿಗೆ 5 ಬ್ಯಾಂಕ್ ಗಳ ಮುಖಾಂತರ ಪಿಂಚಣಿ ಹಣ ಜಮಾ ಮಾಡಲು ಸರ್ಕಾರ ಸೂಚನೆ ನೀಡಿದ್ದು, ನಿವೃತ್ತಿ ಹೊಂದಿರುವ ನೌಕರರು ಎಸ್‍ಬಿಐ, ಕಾರ್ಪೋರೇಷನ್ ಬ್ಯಾಂಕ್, ವಿಜಯ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಸ್ಟೇಟ್ ಲೀಡ್ ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆಯನ್ನು ತೆರೆಯಬೇಕು ಎಂದು ಹೇಳಿದ ಅವರು ಬೇರೆ ಬ್ಯಾಂಕ್‍ಗಳಲ್ಲಿ ಖಾತೆಯ ಸಂಖ್ಯೆಯನ್ನು ನೀಡಬಾರದು ಎಂದು ಅವರು ಸಲಹೆ ನೀಡಿದರು.
ಓಟಿಪಿ ಮಾಹಿತಿ ಗೌಪ್ಯವಾಗಿರಲಿ; ನಿವೃತ್ತ ನೌಕರರು ಇನ್ನು ಮುಂದೆ ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಪತ್ರಾಂಕಿತ ಅಧಿಕಾರಿಗಳ ಸಹಿಗಾಗಿ ಅಲೆಯುವ ಅಗತ್ಯವಿಲ್ಲ, ತಾವು ಹೊಂದಿರುವ ಖಾತೆ ಸಂಖ್ಯೆ, ಆಧಾರ ಸಂಖ್ಯೆ ಹಾಗೂ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ವೆಬ್‍ಸೈಟ್‍ನಲ್ಲಿ ನಮೂದಿಸಿ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ವೆಬ್‍ಸೈಟ್‍ನಲ್ಲಿ ನಮೂದಿಸುವ ಮೂಲಕ ತಮ್ಮ ಜೀವಂತ ಪ್ರಮಾಣ ಪತ್ರವನ್ನು ಆನ್‍ಲೈನ್ ಮೂಲಕವೆ ಸಲ್ಲಿಸಬಹುದು ಎಂದು ನಿವೃತ್ತ ಖಜಾನಾಧಿಕಾರಿ ಶ್ರೀಹರಿ ಅವರು ತಿಳಿಸಿದರು.
ಸಹಾಯಕ ಅಭಿವೃದ್ಧಿ ಅಧಿಕಾರಿ ಸುಧೀಶ್ ಕುಮಾರ್ ಅವರು ಮಾತನಾಡಿ, ಮೊದಲು ತಮ್ಮ ನಿವೃತ್ತಿಯ ಮುನ್ನ ಪಿಂಚಣಿಗಾಗಿ ಪ್ರಸ್ಥಾವನೆಯನ್ನು ಸಲ್ಲಿಸಿ ನಂತರ ತಮ್ಮ ಸೇವೆಯಿಂದ ಬರಬೇಕಾದ ಟೈಂಬಾಂಡ್‍ಗಳನ್ನು ಪಡೆಯಲು ಮರು ಪ್ರಸ್ಥಾವನೆಯನ್ನು ಸಲ್ಲಿಸಿ ಎಂದು ಹೇಳಿದ ಅವರು ನಿವೃತ್ತ ನೌಕರರು ಸರ್ಕಾರದ ಟೈಂಬಾಂಡ್ ಪ್ರಕಾರ ನಿಗದಿತ ಸಮಯದಲ್ಲಿ ಅಗತ್ಯ ದಾಖಲೆಗಳು, ಸೇವೆ ಮಾಡಿರುವುದನ್ನು ನಾವು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಕಳುಹಿಸಿಕೊಡಲಾಗುತ್ತದೆ. ಅದಕ್ಕಾಗಿ 4 ತಿಂಗಳುಗಳ ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದರು.
ಜಿಲ್ಲಾ ಖಜಾನಾಧಿಕಾರಿ ರವೀಂದ್ರ ಹಕಾರಿ ಅವರು ಮಾತನಾಡಿ ನಿವೃತ್ತ ನೌಕರರಿಗೆ ಒಂದು ವೇಳೆ ಹೆಚ್ಚುವರಿ ಆಗಿ ಪಿಂಚಣಿ ಪಾವತಿಯಾಗಿದ್ದಲ್ಲಿ, ಸರ್ಕಾರ ಆದೇಶದಂತೆ ಪಿಂಚಣಿದಾರರಿಂದ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಮರು ಜಮಾ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕಿ ಸಾವಿತ್ರಿ, ಸಹಾಯಕ ಅಭಿವೃದ್ಧಿ ಅಧಿಕಾರಿ ಖೇಮಣ್ಣ, ಗುರುಲಿಂಗಪ್ಪ, ಎಸ್.ಡಿ.ಎ.ಎನ್.ರತ್ನ, ಕೆನರಾ ಬ್ಯಾಂಕಿನ ಸಿಬ್ಬಂದಿ ಕೆ.ಶಶಿಕಲಾ, ಲೀಡ್ ಬ್ಯಾಂಕಿನ ರವೀಂದ್ರನಾಥ್, ಕಾರ್ಪೋರೇಷನ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ಎ.ಶ್ವೇತಾ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲೆಯ ಮತ್ತು ತಾಲೂಕುಗಳ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರು, ಸದಸ್ಯರು ಇದ್ದರು.








