ಗುಬ್ಬಿ
ರಾಜ್ಯದ ರೈತರ ಸಾಲ ಮನ್ನಾ ಮಾಡುವುದಾಗಿ ಕೇವಲ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಮತ್ತು ಮಾತಿಗೆ ತಪ್ಪಿರುವ ಸರಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ನ.19 ರಂದು ವಿಧಾನಸೌಧ ಮುತ್ತಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು ಆದರೆ ಈಗ ರೈತರಿಗೆ ಮಾತಿನ ಮೋಡಿ ಮಾಡಿ ರೈತರ ಸಾಲವನ್ನು ಮನ್ನಾ ಮಾಡದೆ ಸಮಸ್ಯೆ ಸೃಷ್ಠಿ ಮಾಡುತ್ತಿದೆ. ಸಾಲದ ವಿಚಾರವಾಗಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ.
ರಾಜ್ಯದಲ್ಲಿ 114 ತಾಲೂಕುಗಳು ಬರದ ದವಡೆಗೆ ಸಿಲುಕಿವೆ. ಆದ್ದರಿಂದ ರೈತರು ಬೆಳೆದ ಬೆಳೆಗೆ ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಇದ್ದರಿಂದ ಬಿತ್ತನೆ ಮಾಡಿದ ಬೆಳೆ ಕೈಗೆ ಸೇರದೆ ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಕೆ.ಎಸ್.ಪುಟ್ಟಣಯ್ಯನವರು ಮಂಡಿಸಿರುವ ಖಾಸಗಿ ಬಿಲ್ ಪರಿಗಣಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಪ್ಯಾಕೇಜ್ ರೂಪಿಸಬೇಕು. ಜಿಲ್ಲೆಗೆ ಹರಿಯಬೇಕಿದ್ದ ಹೇಮೆ ನೀರು ಸರಿಯಾಗಿ ಹರಿಯದೆ ಜಿಲ್ಲೆಯಲ್ಲಿ ಸಾಕಾಷ್ಟು ಕೆರೆಗಳು ತುಂಬಿಲ್ಲ. ಆದ್ದರಿಂದ ಕೂಡಲೆ ಜಿಲ್ಲೆಗೆ ಬರಬೇಕಾದ ನೀರು ಕೂಡಲೇ ಹರಿಸಬೇಕು. ನಾಲೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸುಮಾರು ಹತ್ತು ಬೇಡಿಕೆಗಳನ್ನು ಇಟ್ಟುಕೊಂಡು ಸರಕಾರವನ್ನು ಒತ್ತಾಯಿಸಲು ಪ್ರತಿಭಟನೆ ಮಾಡುತ್ತಿದ್ದೇವೆ. ಡಾ.ಸ್ವಾಮಿನಾಥನ್ ವರದಿಯಂತೆ ಕೇಂದ್ರ ಸರಕಾರದ ವಿರೋಧಿ ನೀತಿಯನ್ನು ವಿರೋದಿಸಿ ನ.30 ರಂದು ಪಾರ್ಲಿಮೇಂಟ್ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಜಿಲ್ಲೆಯಿಂದ ಸುಮಾರು 500 ಜನರು ಹೊರಟಿದ್ದಾರೆ ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ತಾಲೂಕು ಉಪಾಧ್ಯಕ್ಷ ಶಿವಕುಮಾರ್, ಸಂಚಾಲಕ ಲೋಕೇಶ್, ಜಗದೀಶ್, ಮಂಜು, ವೆಂಕಟೇಶ್ ರೇವಣ್ಣ, ಸತ್ತಿಗಪ್ಪ ಮುಂತಾದವರು ಉಪಸ್ಥಿತರಿದ್ದರು.