ಹೊನ್ನಾಳಿ:
ಜೀವನದಲ್ಲಿ ಯಾವುದೇ ಸಮಸ್ಯೆಗಳು ಬಂದರೂ ರೈತರು ಧೃತಿಗೆಡಬಾರದು ಎಂದು ಜಿಪಂ ಸದಸ್ಯ ಡಿ.ಜಿ. ವಿಶ್ವನಾಥ್ ಹೇಳಿದರು.
ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಕೊನೆ ದಿನ ಭಾನುವಾರ ಹಮ್ಮಿಕೊಂಡ ಹೋರಿ ಬೆದರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ ನೀಡಿಕೆ, ರೈತರ ಬೆಳೆ ಸಾಲ ಮನ್ನಾ ಮತ್ತಿತರ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಜಾರಿಗೊಳಸುವ ಮೂಲಕ ರೈತರ ಬೆನ್ನಿಗೆ ನಿಂತಿದೆ. ಮುಂದಿನ ದಿನಗಳಲ್ಲಿ ಕೂಡ ಸರಕಾರ ರೈತ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ. ಆದ್ದರಿಂದ, ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ತಿಳಿಸಿದರು.
ಹಿಂದೂಗಳು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸುವ ದೀಪಾವಳಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸುವುದರ ಜೊತೆಗೆ ಹಬ್ಬದ ಕೊನೆಯ ದಿನದಂದು ರೈತಾಪಿ ಸಮುದಾಯ ತಮ್ಮ ಬದುಕಿನ ಒಡನಾಡಿಗಳಾದ ಹೋರಿಗಳನ್ನು ಅತ್ಯಂತ ಸುಂದರವಾಗಿ ವಿವಿಧ ಬಣ್ಣಗಳು, ಜೂಲಾ ಮುಂತಾದ ವಸ್ತುಗಳಿಂದ ಶೃಂಗರಿಸಿ ಹೋರಿ ಬೆದರಿಸುವ ಅಂದರೆ ಓಡಿಸುವ ಕಾರ್ಯಕ್ರಮ ನಡೆಸುತ್ತಾರೆ. ಗ್ರಾಮೀಣ ಮತ್ತು ಜಾನಪದ ಸಂಸ್ಕತಿಯ ಪ್ರತೀಕವಾದ ಹೋರಿ ಬೆದರಿಸುವ ಕಾರ್ಯಕ್ರಮ ರೈತರಿಗೆ ಹರ್ಷ ನೀಡುತ್ತದೆ. ರೈತರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಖುಷಿಪಡುತ್ತಿದ್ದಾರೆ ಎಂದು ವಿವರಿಸಿದರು. ಉತ್ತಮ ಪ್ರದರ್ಶನ ನೀಡಿದ ಹೋರಿಗಳಿಗೆ ಬಹುಮಾನಗಳನ್ನು ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಜನತೆ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಆಯನೂರು, ಕುಂಸಿ ಸೇರಿದಂತೆ ಹಲವಾರು ಊರುಗಳಿಂದ ಜನರು ಭಾಗವಹಿಸಿದ್ದರು.
ಚೀಲೂರು ಗ್ರಾಪಂ ಸದಸ್ಯ ಡಿ.ಎನ್. ಗಿರೀಶ್, ಗ್ರಾಮದ ಮುಖಂಡರಾದ ಡಿ.ಎಸ್. ನಾಗರಾಜಪ್ಪ, ಡಿ.ಸಿ. ಚನ್ನೇಶ್, ಡಿ.ಎನ್. ಮಹೇಶ್ವರಪ್ಪ ಸೇರಿದಂತೆ ಗ್ರಾಮದ ಹಲವಾರು ಮುಖಂಡರು, ಯುವಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಹೋರಿಗಳನ್ನು ಹಿಡಿದವರು ಹಾಗೂ ಅತೀ ಹೆಚ್ಚು ಬಾರಿ ಯಾರಿಗೂ ಸಿಗದೇ ಓಡಿದ ಹೋರಿಗಳ ಮಾಲೀಕರಿಗೂ ಬಹುಮಾನ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








