ಬ್ಯಾಡಗಿ:
ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಅಭಿವೃದ್ಧಿ ಕಾಮಗಾರಿಗಳ ವೇಗ ಎರಡು ಪಟ್ಟು ಹೆಚ್ಚಾಗಿದ್ದು ಇದನ್ನು ಕೇವಲಪ್ರಚಾರಕ್ಕಾಗಿ ಹೇಳುತ್ತಿಲ್ಲ, ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ಪಡೆದುಕೊಳ್ಳುವ ಮೂಲಕ ಬ್ಯಾಡಗಿ ಮತಕ್ಷೇತ್ರದಲ್ಲಿ ಗಮನಾರ್ಹ ರೀತಿ ಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ (ಪಿಎಂಜಿಎಸ್ವೈ) ತಾಲೂಕಿನ ಮಾಸಣಗಿಯಿಂದ ಮಲ್ಲೂರ ಗ್ರಾಮವನ್ನು ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕಳೆದ ನಾಲ್ಕು ವರ್ಷಗಳಲ್ಲಿ ದೇಶದಾದ್ಯಂತ ಎಲ್ಲ ಭಾಗಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ಇದರಿಂದ ದೇಶದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂಬ ಅಂಶಗಳು ಸಮೀಕ್ಷೆಗಳಿಂದ ತಿಳಿದುಕೊಳ್ಳಬಹುದಾಗಿದ್ದು ಯಾ ವುದೇ ಕಾರಣಕ್ಕೂ ಪಕ್ಷ ರಾಜಕಾರಣಕ್ಕಿಂತ ದೇಶ ಅಭಿವದ್ಧಿಯೇ ಮೊದಲೆಂಬ ತತ್ವದಡಿ ಅಧಿಕಾರವನ್ನು ನಡೆಸಲಾಗುತ್ತಿದೆ ಎಂದರು.
ರಸ್ತೆಗಳ ಹಳ್ಳಿಗಳ ಜೀವಾಳ:ರಸ್ತೆಗಳು ಸುಧಾರಣೆಯಾಗದೇ ಹಳ್ಳಿಗಳು ಉದ್ಧಾರವಾಗಲು ಸಾಧ್ಯವಿಲ್ಲ ಹೀಗಾಗಿ ರಸ್ತೆಗಳೇ ಹಳ್ಳಿಗಳ ಜೀವಾಳ ವೆಂಬುದರಲ್ಲಿ ಎರಡು ಮಾತಿಲ್ಲ. ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ ಅವಧಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ನೀಡಲಾಗಿದ್ದು ಅದು ಇಂದಿಗೂ ಮುಂದುವರೆದುಕೊಂಡು ಬಂದಿದೆ ಎಂದರು.
ರಸ್ತೆ ಸಂಪರ್ಕಕ್ಕೆ ಬದ್ಧ: ತಾಲೂಕಿನ ಎಲ್ಲ ಗ್ರಾಮಗಳಿಗೂ ಸಾರಿಗೆ ಸೇರಿದಂತೆ ವಾಹನ ಸಂಚಾರ ಸುಗಮಗಳಿಸುವ ಸದಿಚ್ಚೆಯನ್ನು ಹೊಂದಿದ್ದು ಪ್ರತಿಯೊಂದು ಗ್ರಾಮಕ್ಕೂ ರಸ್ತೆ ಸಂಪರ್ಕ ಹಾಗೂ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು ಅಧಿಕಾರದ ಅವಧಿಯಲ್ಲಿ ಡಾಂಬರೀಕರಣ ಸೇರಿದಂತೆ ನೂತನ ರಸ್ತೆಗಳನ್ನು ನಿರ್ಮಿಸಲು ಮುಂದಾಗುವುದಾಗಿ ತಿಳಿಸಿದರು.
ಶುದ್ಧ ಘಟಕಗಳನ್ನು ಕೆಡದಂತೆ ನೋಡಿಕೊಳ್ಳಿ: ರೋಗರುಜಿನಗಳನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ನೀರು ಶುದ್ಧೀಕರಿಸುವ ಘಟಕಗಳನ್ನು ಆರಂಭಿಸಲಾಗಿದೆ, ಗ್ರಾಮಸ್ಥರು ಇಂತಹ ಕುಡಿಯುವ ನೀರಿನ ಘಟಕಗಳನ್ನು ಹಾಳು ಮಾಡದೇ ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಎಪಿಎಮ್ಸಿ ಸದಸ್ಯ ಉಳಿವೆಪ್ಪ ಕುರುವತ್ತಿ, ಗ್ರಾಪಂ.ಅಧ್ಯಕ್ಷೆ ಅಕ್ಕಮ್ಮ ಓಲೇಕಾರ, ಉಪಾಧ್ಯಕ್ಷ ಬಸಪ್ಪ ಬನ್ನಿಹಟ್ಟಿ, ಸದಸ್ಯರಾದ ಶಿವಪ್ಪ ಕುಮ್ಮೂರ, ಕುಬೇರಪ್ಪ ಕೊರ್ಲಿ, ಮುಖಂಡರಾದ ಶಿವಬಸಪ್ಪ ಕುಳೇನೂರ, ಚನ್ನಪ್ಪ ನೆಗಳೂರ, ನಿಂಗಪ್ಪ ಹೆಗ್ಗಣ್ಣನವರ, ಮಲ್ಲೇಶಪ್ಪ ದೇಸಾಯಿ, ತಾ.ಪಂ. ಮಾಜಿ ಅಧ್ಯಕ್ಷ ಚನಬಸಪ್ಪ ದೇಸಾಯಿ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಲ್ಲೇಶ ಮೋಟೆನವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








