ಬಿಜೆಪಿ ಪಾಲಿಗೆ ಅನಂತ್‍ಕುಮಾರ್ ದೊಡ್ಡಶಕ್ತಿ : ಕೆ.ಎಸ್.ಈಶ್ವರಪ್ಪ

ಚಿತ್ರದುರ್ಗ:

      ಎಲ್ಲಾ ಜಾತಿಯವರನ್ನು ಬಿಜೆಪಿ.ಗೆ ಕರೆ ತಂದು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ದೊಡ್ಡ ಶಕ್ತಿ ಅನಂತಕುಮಾರ್‍ರವರನ್ನು ಕಳೆದುಕೊಂಡಿದ್ದೇವೆ. ಪಕ್ಷ ಸಂಘಟನೆಗಾಗಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕರೆ ಕೊಟ್ಟರು.

        ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಅನಂತಕುಮಾರ್‍ರವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಕಾರ್ಯಕರ್ತರೊಡನೆ ಕಾರ್ಯಕರ್ತರಾಗಿ, ನಾಯಕರ ಜೊತೆ ನಾಯಕರಾಗಿ ಎಲ್ಲರ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಂಘಟನಾ ಚತುರರಾಗಿದ್ದ ಅನಂತಕುಮಾರ್ ಚುನಾವಣೆಯಲ್ಲಿ ಠೇವಣಿ ಸಿಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಸ್ಪರ್ಧಿಸುವ ಧೈರ್ಯ ಮಾಡುತ್ತಿದ್ದರು. ಕೇವಲ ಗ್ರಾ.ಪಂ.ಚುನಾವಣೆಗೆ ನಿಂತು ಗೆಲ್ಲುವುದು ಕಷ್ಟವಾಗಿರುವ ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಅನಂತಕುಮಾರ್ ಸತತವಾಗಿ ಆರು ಬಾರಿ ಸಂಸದರಾಗಿದ್ದರೆಂದರೆ ಅವರಲ್ಲಿದ್ದ ನಾಯಕತ್ವದ ಗುಣವೇ ಸಾಕ್ಷಿ ಎಂದು ಸ್ಮರಿಸಿಕೊಂಡರು.

        ಬಿಜೆಪಿ.ಜೆಡಿಎಸ್.ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನಾನು ಸಣ್ಣ ನೀರಾವರಿ ಮಂತ್ರಿಯಾಗಿದ್ದೆ. ರೈತರಿಗೆ ನೀರು ಕೊಡುವುದು ಹೇಗೆ ಎನ್ನುವ ಚಿಂತೆ ನನ್ನನ್ನು ಕಾಡುತ್ತಿತ್ತು. ಆಗ ನನಗೆ ಧೈರ್ಯ ತುಂಬಿದವರು ಅನಂತಕುಮಾರ್. ಅವರು ಕೇಂದ್ರ ರಸಗೊಬ್ಬರ ಮಂತ್ರಿಯಾಗಿದ್ದಾಗ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗುತ್ತಿರುವುದಕ್ಕೆ ಲಗಾಮು ಹಾಕಿ ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಸಿಗುವಂತೆ ಕಾಳಜಿ ವಹಿಸಿ ಗೊಬ್ಬರದ ಹಾಹಾಕಾರವನ್ನು ತಪ್ಪಿಸಿದರು. ಅವರು ಪಕ್ಷಕ್ಕಾಗಿ ಏನು ಮಾಡಿದರೂ ಎಂಬುದನ್ನು ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರು ನೆನಪು ಮಾಡಿಕೊಂಡು ಪಕ್ಷವನ್ನು ಕಟ್ಟಿದಾಗ ಮಾತ್ರ ಅನಂತಕುಮಾರ್ ಕಂಡಿದ್ದ ಕನಸು ನನಸಾಗಲಿದೆ ಎಂದು ಹೇಳಿದರು.

       ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಜೋಡೆತ್ತಿನಂತೆ ರೈತರ ಪರವಾಗಿ ರಾಜ್ಯದಲ್ಲಿ ಸಂಚರಿಸಿದ್ದರಿಂದ ನಾಲ್ಕು ಶಾಸಕರಿದ್ದ ಬಿಜೆಪಿ. ನಲವತ್ತು ಶಾಸಕರನ್ನು ಕೊಡುಗೆಯಾಗಿ ನೀಡಲು ಕಾರಣವಾಯಿತು. ಅಟಲ್‍ಬಿಹಾರಿ ವಾಜಪೇಯಿ, ಅದ್ವಾನಿ, ಮೋದಿ ಜೊತೆ ಕುಳಿತು ಚರ್ಚಿಸಿ ದೇಶದ ಅಭಿವೃದ್ದಿಗೆ ಚಿಂತನೆ ನಡೆಸುತ್ತಿದ್ದರು. ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಹಾರಿಸಬೇಕೆಂಬ ಛಲ ಅವರಲ್ಲಿತ್ತು.

        ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಿರಬೇಕೆಂದು ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ನಾನು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ 39 ಹಿಂದುಳಿದ ಮಠಗಳಿಗೆ 95 ಕೋಟಿ ರೂ.ಗಳ ಅನುದಾನ ನೀಡಲು ಅನಂತಕುಮಾರ್ ಕಾರಣ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು, ಅನಂತಕುಮಾರ್. ರೈತರ ವಿಚಾರ ತೆಗೆದುಕೊಂಡು ಹೋರಾಟ ಮಾಡಿದ್ದರಿಂದ ವಾಜಪೇಯಿ, ಮೋದಿ ಪ್ರಧಾನಿಯಾಗಿದ್ದು, ಬಿಜೆಪಿ.ಶಿಸ್ತಿನ ಪಕ್ಷ.

        ಭ್ರಷ್ಟಾಚಾರದಿಂದ ದೂರವಿರಬೇಕು ಎನ್ನುವ ಎಲ್ಲರ ಆಸೆ. ಬಚ್ಚಲು ಮನೆಯಂತಿರುವ ರಾಜಕಾರಣವನ್ನು ದೇವರ ಮನೆಯನ್ನಾಗಿ ಮಾಡಲು ಆಗುವುದಿಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಮಾಡಿದ್ದೇವೆ. ಆದರೆ ಮಾಡಿದ ತಪ್ಪನ್ನು ತಿದ್ದುವಂತ ಸಂಘಟನೆ ನಮ್ಮದು. ಹಿರಿಯರು ಮಾಡಿದ ತಪಸ್ಸಿನಿಂದ ರಾಜ್ಯದಲ್ಲಿಯೂ ಬಿಜೆಪಿ.ಗೆ ಅಧಿಕಾರ ಸಿಕ್ಕಿತು. ಅನಂತಕುಮಾರ್ ಜೀವನ ಕೂಡ ಒಂದು ತಪಸ್ಸಿನಂತಿತ್ತು. ಅವರ ದಾರಿಯಲ್ಲಿ ಎಲ್ಲರೂ ಸಾಗೋಣ ಎಂದರು.

        ವಿಭಾಗೀಯ ಸಹಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿ 36 ವರ್ಷಗಳಿಂದಲೂ ನನ್ನ ಅವರ ನಿಕಟ ಸಂಪರ್ಕವಿತ್ತು. ಎಲ್ಲಾ ಹೋರಾಟಗಳಲ್ಲಿಯೂ ಜೊತೆ ಜೊತೆಯಾಗಿ ಕೆಲಸ ಮಾಡಿದ್ದೇವೆ. ಅನೇಕ ಸಂದರ್ಭಗಳಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಹೆಸರಿಡಿದು ಕರೆಯುವ ನೆನಪಿನ ಶಕ್ತಿ ಅವರದು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಮೆಟ್ರೋ ಜಾರಿಗೆ ತಂದರು. ಹಾಗಾಗಿ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ ಎನ್ನುವುದು ಅವರ ನಿಧನದ ನಂತರವೇ ಎಲ್ಲರಿಗೂ ಗೊತ್ತಾಗಿದ್ದು, ಎಂದು ಸ್ಮರಿಸಿಕೊಂಡರು.

         ಸಂಘಟನಾ ಚತುರ ಅನಂತಕುಮಾರ್‍ರವರ ನಿಧನದಿಂದ ಪಕ್ಷ ದೊಡ್ಡ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ನಾವುಗಳು ಕೇಂದ್ರಕ್ಕೆ ನಿಯೋಗ ಹೋಗಿದ್ದ ಪರಿಣಾಮವಾಗಿ ರಾಜ್ಯದ ಐದು ಜಿಲ್ಲೆಗಳಲ್ಲಿ ಜನರಿಕ್ ಔಷಧ ಮಳಿಗೆ ಆರಂಭವಾಗಲು ಅನಂತಕುಮಾರ್ ಕಾರಣಕರ್ತರಾಗಿದ್ದರು ಎಂದು ಸ್ಮರಿಸಿದರು. ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ ವೇದಿಕೆಯಲ್ಲಿದ್ದರು.
ರಾಜೀವಲೋಚನ, ರಾಘಣ್ಣ, ತಿಪ್ಪೇಸ್ವಾಮಿ, ಎಂ.ಪಿ.ಗುರುರಾಜ್, ಶಿವಣ್ಣಾಚಾರ್ ಇವರುಗಳು ಅನಂತಕುಮಾರವರೊಂದಿಗಿದ್ದ ಒಡನಾಟವನ್ನು ಹಂಚಿಕೊಂಡರು.

         ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸೂರನಳ್ಳಿ ವಿಜಯಣ್ಣ, ವಕ್ತಾರ ನಾಗರಾಜ್‍ಬೇದ್ರೆ, ನರೇಂದ್ರ, ಜಿತೇಂದ್ರ, ಟೌನ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ, ಸಂಪತ್‍ಕುಮಾರ್, ಶೈಲಜಾರೆಡ್ಡಿ, ರತ್ನಮ್ಮ, ಚಂದ್ರಿಕ ಲೋಕನಾಥ್, ನಗರಸಭೆ ಸದಸ್ಯರುಗಳಾದ ಅನುರಾಧ, ಹರೀಶ್, ಶಶಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಕಾರ್ಯದರ್ಶಿ ಪ್ರಾಣೇಶ್‍ರಾವ್ ಇನ್ನು ಮುಂತಾದವರು ಶ್ರದ್ದಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link