ಪಾವಗಡ
ಇಲ್ಲಿನ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ತುಮಕೂರಿನ ಹಿರೆಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯರು ಶನಿವಾರ ಭೇಟಿಯಿತ್ತು ಸ್ವಾಮಿ ಜಪಾನಂದಜಿರವರು ಕೈಗೊಂಡಿರುವ ಜನಸೇವಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಸರಿ ಸುಮಾರು ಇಪ್ಪತ್ತಕ್ಕೂ ಮಿಗಿಲಾದ ಜನಪರ ಆರೋಗ್ಯ ಹಾಗು ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ರೀಗಳು ಅತ್ಯಂತ ಆಸಕ್ತಿಯಿಂದ ವೀಕ್ಷಿಸಿದರು. ಸ್ವಾಮಿ ವಿವೇಕಾನಂದರ ಉಪದೇಶಗಳನ್ನು ಅನುಷ್ಠಾನರೂಪಕ್ಕೆ ಅಹರ್ನಿಶಿ ತರಲು ಪ್ರಯತ್ನಿಸುತ್ತಿರುವ ಸ್ವಾಮಿ ಜಪಾನಂದಜಿ ಹಾಗು ಅವರ ಬಳಗವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಡಿವಿಜಿ ಚಿಂತನೆಯ ಹತ್ತನೆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಭೇಟಿಯಿತ್ತ ಶ್ರೀಗಳು ಸ್ವಾಮಿ ಜಪಾನಂದಜಿ ರವರ ಉಪನ್ಯಾಸಗಳಿಗೆ ಮಾರು ಹೋಗಿದ್ದ ಜನರ ಪೈಕಿ ತಾವು ಒಬ್ಬರೆಂದು ತಿಳಿಸಿದರು.
ನಂತರ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಭೇಟಿಯಿತ್ತು, ಡಿವಿಜಿ ಹತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನ ಉಪನ್ಯಾಸಕರಾದ ಸ್ವಾಮಿ ಜಪಾನಂದಜಿರವರ ಅಮೋಘ ಭಾಷಣವನ್ನು ಆಲಿಸಿದ ಶ್ರೀಗಳು ಸಾರಸ್ವತ ಲೋಕದ ದಿಗ್ಗಜರಾದ ಡಿವಿಜಿ ಬಗ್ಗೆ ತಮ್ಮ ವಿಚಾರವನ್ನು ಮಂಡಿಸಿದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ಮತ್ತು ಅರ್ಥಗರ್ಭಿತವಾಗಿ ಪಟ್ಟಣದ ಕನ್ಯಕಾಪರಮೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ಕಿಕ್ಕಿರಿದ ಸಾಹಿತ್ಯಾಭಿಮಾನಿಗಳ ಸಮಕ್ಷಮದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಸಮಾರಂಭ ಕನ್ನಡ ಸಾಹಿತ್ಯ ಪರಿಷತ್, ಆರ್ಯವೈಶ್ಯ ಮಂಡಳಿ, ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಪ್ರಗತಿಪರ ವೇದಿಕೆಯ ಆಶ್ರಯದಲ್ಲಿ ನಡೆಯಿತು. ಸುಧೇಶ್ ಕುಮಾರ್, ನಾಗೇಂದ್ರಪ್ಪ ಮತ್ತು ತಾ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಖಾನ್ ಭಾಗವಹಿಸಿದ್ದರು. ಪಟ್ಟಣದ ಬುದ್ದಿಜೀವಿಗಳು, ಸಾಹಿತ್ಯಾಸಕ್ತರು, ನಾಗರಿಕರು ಭಾಗವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








