ಬ್ಯಾಡಗಿ:
ಕನ್ನಡ ನಾಡಿನ ನೆಲ, ಜಲ,ಭಾಷೆ ಹಾಗೂ ಸಂಸ್ಕತಿಯ ಬಗ್ಗೆ ಪ್ರತಿಯೊಬ್ಬರೂ ಗೌರವಾಭಿಮಾನವನ್ನು ಬೆಳಸಿಕೊಳ್ಳಬೇಕೆಂದು ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಹೇಳಿದರು.
ಅವರು ಸೋಮವಾರ ತಾ.ಪಂ.ಸಾಮರ್ಥಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಹಾಗೂ ಸ್ಥಳೀಯ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಶಿಶು ಅಭಿವೃದ್ಧಿ ಯೋಜನೆ ಮತ್ತು ಬಾಲಭವನ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ 16 ವರ್ಷದ ವಯೋಮಿತಿಯೊಳಗಿನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಕನ್ನಡ ಗೀತೆಗಳ ಸ್ಫರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ನವಂಬರ ತಿಂಗಳು ಕನ್ನಡಮಯವಾಗಿರಬೇಕು. ಅಲ್ಲದೇ ವರ್ಷ ಪೂರ್ತಿ ಕನ್ನಡ ಭಾಷೆಗೆ ಪ್ರತಿಯೊಬ್ಬ ಕನ್ನಡಿಗನು ಆಧ್ಯತೆ ನೀಡಬೇಕಾಗಿದೆ. ಮಕ್ಕಳಲ್ಲಿ ಕನ್ನಡ ಭಾಷೆಯ ಅಭಿಮಾನವನ್ನು ಬೆಳಸುವ ಜೊತೆಗೆ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಹೊರ ತರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಈ ಸ್ಪರ್ಧೆಯನ್ನು ಏರ್ಪಡಿಸಿದ್ದು, ಮಕ್ಕಳು ಸಹ ತಮ್ಮ ಪ್ರತಿಭೆಯನ್ನು ಯಾವುದೇ ಅಳುಕನ್ನು ತೋರದೇ ಧೈರ್ಯದಿಂದ ಪ್ರದರ್ಶಿಸಿಸಬೇಕು. ಯಾವುದೇ ಕಾರ್ಯಕ್ರಮವಾಗಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಿಂಜರಿಕೆ ಮಾಡಬಾರದೆಂದು ಮಕ್ಕಳಿಗೆ ತಿಳಿ ಹೇಳಿದರು.
ತೀರ್ಪುಗಾರರಾಗಿ ಆಗಮಿಸಿದ್ದ ಪ್ರಕಾಶ ಕೊರಗರ ಮಾತನಾಡಿ ಕಲೆ ಎಂಬುದು ದೈವದತ್ತ ಕೊಡುಗೆ. ಮಕ್ಕಳು ಅದನ್ನು ಸಂಪೂರ್ಣವಾಗಿ ಬಳಸಿಕೊಂಡು ತನ್ನ ಪ್ರತಿಭೆಯನ್ನು ಹೊರ ಚೆಲ್ಲಬೇಕು. ಪ್ರತಿಯೊಬ್ಬರೂ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಯಾವುದೇ ಸಂಕೋಚವನ್ನು ಮಾಡಿಕೊಳ್ಳದೇ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಲಾ ಪ್ರದರ್ಶನವನ್ನು ಮಾಡಬೇಕೆಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ವಿಜಯಕುಮಾರ ಮಾತನಾಡಿ ರಾಜ್ಯ ಸರಕಾರವು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದ 16 ವರ್ಷ ವಯೋಮಿತಿಯುಳ್ಳ ಮಕ್ಕಳಿಗಾಗಿ ಕನ್ನಡ ಗೀತೆಗಳ ಸ್ಪರ್ಧೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರಾರಂಭಿಸಿದ್ದು, ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ತಾಲೂಕಾ ಮಟ್ಟದಲ್ಲಿ ಕೈಗೊಳ್ಳಲಾಗಿದೆ.
ಇಲ್ಲಿನ ವಿಜೇತರನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಿ ಕಳಿಸಿಕೊಡಲಾಗುವುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಶಿಕ್ಷಣ ಇಲಾಖೆಯ ಹರಿಜನ, ಶಿಕ್ಷಕಿ ಸುಲೋಚನಾ ಸಹಪೂರ, ಅಂಗನವಾಡಿ ಮೇಲ್ವಿಚಾರಕಿಯರಾದ ಸುರ್ವರ್ಣ ಜಡಿಮಠ, ಸುಶೀಲಮ್ಮ ಕುರಡಮ್ಮನವರ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಉಮಾದೇವಿ ಸ್ವಾಗತಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








