ಬ್ಯಾಡಗಿ:
ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ತಾ.ಪಂ.ಸಭೆಗೆ ಬಾರದೇ ತಮ್ಮ ಸಹಾಯಕರನ್ನು ಸಭೆಗೆ ಕಳುಹಿಸುವ ಸಂಪ್ರದಾಯವನ್ನು ರೂಡಿಸಿಕೊಳ್ಳುವ ಮೂಲಕ ತಾ.ಪಂ.ಸಭೆಗೆ ತಮ್ಮ ಅಸಡ್ಡೆಯನ್ನು ತೊರಿತ್ತಿದ್ದಾರೆ. ಇದರಿಂದಾಗಿ ಅರಣ್ಯ ಇಲಾಖೆಯ ಪ್ರಗತಿ ನಮಗೆ ಅರ್ಥವಾಗುವುದಾದರೂ ಹೇಗೆ? ಎಂದು ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ತಮ್ಮ ಅಸಮದಾನವನ್ನು ಹೊರ ಹಾಕಿದ ಘಟನೆ ಬುಧವಾರ ನಡೆದ ತಾ.ಪಂ.ಕೆಡಿಪಿ ಸಭೆಯಲ್ಲಿ ಜರುಗಿತು.
ಇಲ್ಲಿನ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಅವರು ಅರಣ್ಯ ಇಲಾಖೆಯ ಮೇಲೆ ನಡೆದ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಬ್ಯಾಡಗಿ ಹಾಗೂ ರಾಣೆಬೆನ್ನೂರ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಸಭೆಗೆ ಆಗವಿಸಿದೇ ಏನಾದರೊಂದು ಸಬೂಬು ಹೇಳಿ ತಾ.ಪಂ.ಸಭೆಯಿಂದ ದೂರ ಉಳಿಯುವ ಮೂಲಕ ಸಭೆಗೆ ತಮ್ಮ ಸಹಾಯಕರನ್ನು ಕಳಿಸಿಕೊಡುವುದನ್ನು ರೂಡಿಸಿಕೊಂಡಿದ್ದಾರೆ. ಇದರಿಂದಾಗಿ ಸಭೆಗೆ ಬಂದ ಅರಣ್ಯ ಇಲಾಖೆಯ ಸಹಾಯಕರು, ಇಲಾಖೆಯ ಮೇಲಿನ ಪ್ರಗತಿಯನ್ನು ವಿವರಿಸುವಾಗ ಅಸಮರ್ಪಕ ಉತ್ತರ ನೀಡುತ್ತಿದ್ದಾರೆಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾತನಾಡಿ ಪದೇ ಪದೇ ಪ್ರತಿ ಸಭೆಯಲ್ಲೂ ಇದೇ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಇದೇ ಸಂಪ್ರದಾಯವನ್ನು ರೂಡಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಇಲಾಖೆಯ ಪ್ರಗತಿಗೆ ತೊಂದೆರೆಯಾಗುತ್ತಲಿದೆ. ಆದ್ದರಿಂದ ಬ್ಯಾಡಗಿ ಹಾಗೂ ರಾಣೆಬೆನ್ನೂರ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ತಾ.ಪಂ.ಕಾರ್ಯನಿರ್ವಹಕ ಅಧಿಕಾರಿ ಡಿ.ಟಿ.ಜಯಕುಮಾರ ಅವರಿಗೆ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ್ರ ಕರೇಗೌಡ್ರ ಮಾತನಾಡಿ ಅರಣ್ಯ ಇಲಾಖೆಯ ಜಮೀನಿನಲ್ಲಿ ರೈತರು ಜಮೀನಿನ ಕೆಲಸಕ್ಕಾಗಿ ಅಲ್ಪ ಸ್ವಲ್ಪು ಮಣ್ಣನ್ನು ಉಪಯೋಗಿಸಕೊಳ್ಳಲು ತಮ್ಮ ವಾಹನಗಳಲ್ಲಿ ಮಣ್ಣನ್ನು ಉಪಯೋಗಿಸಿಕೊಂಡರೇ ಅಂತಹ ರೈತರ ಟ್ರಾಕ್ಟರ್‍ಗಳನ್ನು ಹಿಡಿಯುವುದು ಅವರಿಂದ ದಂಡ ತುಂಬಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ರೈತರು ಅಂಗಲಾಚಿದರೂ ಮಾನವೀಯತೆಯ ದೃಷ್ಟಿಯಿಂದ ಅವರನ್ನು ನೋಡದೇ ಅವರ ವಾಹನವನ್ನು ತಡೆಯುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೇ ಇಂಥಹ ಮಹತ್ವದ ಕೆಡಿಪಿ ಸಭೆಗೆ ಬರಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಏಕೆ? ಎಂಬುದು ಅರ್ಥವಾಗುತ್ತಿಲ್ಲವೆಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಅಂತರ್ ಜಾತಿ ವಿವಾಹವಾದ ದಂಪತಿಗಳಲ್ಲಿ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಲ್ಲಿ 3 ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಲಾಗುತ್ತಿದೆ. ವಿವಾಹವಾದ ದಂಪತಿಗಳಲ್ಲಿ ಪುರುಷನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದರೇ 2 ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ಸರಕಾರ ಕೊಡುತ್ತಲಿದೆಯಲ್ಲದೇ ಪರಿಶಿಷ್ಟ ಜಾತಿಗೆ ಸೇರಿದ ವಿಧೆವೆ ಮಹಿಳೆಯನ್ನು ವಿವಾಹವಾದ 3 ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ಲಮಾಣಿ ಸಭೆಗೆ ತಿಳಿಸಿದರು.
ತಾಲೂಕಿನಲ್ಲಿರುವ 16 ಪಶುಆಸ್ಪತ್ರೆಗಳಲ್ಲಿ 12 ಪಶುಆಸ್ಪತ್ರೆಗಳಿಗೆ ಕುಡಿಯುವ ನೀರಿನ ಸೌಲಭ್ಯಗಳಿಲ್ಲವೆಂದು ತಾಲೂಕಾ ಸಹಾಯಕ ನಿರ್ಧೇಶಕರು ಸಭೆಗೆ ತಿಳಿಸಿದರು. ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ ತಾಲೂಕಿನಲ್ಲಿ ಯಾವ ಯಾವ ಗ್ರಾಮಗಳಲ್ಲಿ ಪಶುಆಸ್ಪತ್ರೆಗಳಿಗೆ ಕುಡಿಯುವ ನೀರಿನ ಸೌಲಭ್ಯಗಳಿಲ್ಲವೋ ಅವುಗಳ ಯಾದಿಯನ್ನು ನೀಡಲು ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ್ರ ಕರೇಗೌಡ್ರ ಮಾತನಾಡಿ ಪಶುಆಸ್ಪತ್ರೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಲು ಪ್ರತಿ ಗ್ರಾಮ ಪಂಚಾಯತಗಳಿಗೆ ತಿಳಿಸಿ ಕುಡಿಯುವ ನೀರನ ಸೌಲಭ್ಯ ಒದಗಿಸಿಕೊಡಲಾಗುವುದೆಂದರು.
ಲೋಕೋಪಯೋಗಿ ಇಲಾಖೆ, ಪಂಚಾಯತರಾಜ್ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ, ಅಬಕಾರಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರೇ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ತಮ್ಮ ಇಲಾಖೆಯ ಪ್ರಗತಿ ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ