ಯಡಿಯೂರಪ್ಪನವರದು ನನಸಾಗದ ಕನಸು : ಸಿದ್ದರಾಮಯ್ಯ

ಬೆಂಗಳೂರು

        ಮುಂದಿನ ಪಾರ್ಲಿಮೆಂಟ್ ಚುನಾವಣೆಯ ಒಳಗೆ ಮುಖ್ಯಮಂತ್ರಿ ಹುದ್ದೆಗೇರದಿದ್ದರೆ ಇನ್ನು ಜೀವನದಲ್ಲೇ ಸಿಎಂ ಆಗುವುದಿಲ್ಲ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿದೆ. ಹೀಗಾಗಿ ಬೇರೆ ಪಕ್ಷದ ಶಾಸಕರನ್ನು ಖರೀದಿಸಲು ಒದ್ದಾಡುತ್ತಿದ್ದಾರೆ. ಆದರೆ ಅದರಲ್ಲಿ ಅವರು ಸಂಪೂರ್ಣ ವಿಫಲರಾಗುತ್ತಾರೆ. ಅವರ ಕನಸೂ ಬಿದ್ದು ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.

       ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು.ಅದಲ್ಲದೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯ ಒಳಗೆ ಸಿಎಂ ಆಗದಿದ್ದರೆ ಇನ್ನೆಂದೂ ಆ ಹುದ್ದೆಗೇರಲು ಸಾಧ್ಯವಿಲ್ಲ ಎಂದವರಿಗೆ ಗೊತ್ತಿದೆ.ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ಖರೀದಿಸಲು ಹರಸಾಹಸ ಮಾಡುತ್ತಿದ್ದಾರೆ.ಆದರೆ ಅದು ಈಡೇರದ ಕೆಲಸ ಎಂದರು.

        ಇದೇ ಕಾರಣಕ್ಕಾಗಿ ಡಿಸೆಂಬರ್ 22 ರಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಕತೆ ಹೇಳುತ್ತಿದ್ದಾರೆ.ಈ ಕತೆಯನ್ನು ಅವರು ಆರು ತಿಂಗಳಿನಿಂದ ಹೇಳುತ್ತಿದ್ದಾರೆ. ಆದರೆ ಇದುವರೆಗೆ ಏನೂ ಆಗಿಲ್ಲ.ಮುಂದಿನ ದಿನಗಳಲ್ಲೂ ಸರ್ಕಾರಕ್ಕೇನೂ ಆಗುವುದಿಲ್ಲ ಎಂದರು.

       ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಮಧ್ಯಪ್ರದೇಶ,ರಾಜಸ್ತಾನ ಹಾಗೂ ಛತ್ತೀಸ್‍ಘಡಗಳಲ್ಲಿ ಗೆಲುವು ಸಾಧಿಸಲಿದೆ.ಉಳಿದಂತೆ ಮಿಜೋರಾಂ ಮತ್ತು ತೆಲಂಗಾಣದಲ್ಲಿ ಅತಂತ್ರ ಪರಿಸ್ಥಿತಿ ಇದೆ.

       ಏನೇ ಆದರೂ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು ಕೇಂದ್ರದಲ್ಲಿರುವ ಮೋದಿ ಸರ್ಕಾರ ನೂರಕ್ಕೆ ನೂರು ಪರ್ಸೆಂಟ್ ಅಧಿಕಾರ ಕಳೆದುಕೊಳ್ಳಲಿದೆ ಎಂದರು.

          ಕರ್ನಾಟಕದ ಚುನಾವಣೆ ಪಂಚರಾಜ್ಯಗಳ ಚುನಾವಣೆ ಮೇಲೆ ಒಂದಷ್ಟು ಪರಿಣಾಮ ಬೀರಿದೆ.ಹಾಗೆಯೇ ಪಂಚರಾಜ್ಯಗಳ ಚುನಾವಣೆ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ.ಇದರಲ್ಲಿ ಯಾವ ಅನುಮಾನವೂ ಬೇಡ ಎಂದವರು ಹೇಳಿದರು.

        ತಮ್ಮ ವಿದೇಶ ಪ್ರವಾಸ ಸರ್ಕಾರದ ಮೇಲೆ ಏನಾದರೂ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ? ಅದು ನಿಮ್ಮ ಅಸಮಾಧಾನದ ಮುನ್ಸೂಚನೆಯೇ? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ವಿದೇಶ ಪ್ರವಾಸಕ್ಕೂ, ಸರ್ಕಾರಕ್ಕೂ ಯಾವ ಸಂಬಂಧವೂ ಇಲ್ಲ ಎಂದರು.

      ಪ್ರತಿಯೊಬ್ಬರಿಗೂ ವೈಯಕ್ತಿಕ ಜೀವನ ಇರುತ್ತದೆ. ಹಾಗೆಯೇ ಇದು ನನ್ನ ವೈಯಕ್ತಿಕ ಜೀವನ. ಗೆಳೆಯರೊಬ್ಬರ ಕುಟುಂಬದಲ್ಲಿ ಮದುವೆ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ನಾನು ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಅವ್ಯವಹಾರ ಇಲ್ಲ

       ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೂವತ್ತೈದು ಸಾವಿರ ಕೋಟಿ ರೂಗಳ ಖರ್ಚು ವೆಚ್ಚ ಸರಿಹೊಂದುತ್ತಿಲ್ಲ. ಹೀಗಾಗಿ ಇದು ಭಾರೀ ಪ್ರಮಾಣದ ಭ್ರಷ್ಟಾಚಾರ ಎಂದು ಬಿಜೆಪಿ ಮಾಡುತ್ತಿರುವುದು ಬರೀ ಅಪಪ್ರಚಾರ ಎಂದು ಅವರು ಹೇಳಿದರು.

         ಸರ್ಕಾರ ಎಲ್ಲ ವರ್ಷಗಳಲ್ಲೂ ಇಟ್ಟ ಹಣವನ್ನು ಬಳಕೆ ಮಾಡಲು ಆಗುವುದಿಲ್ಲ.ಇದು ನನ್ನ ಕಾಲದಲ್ಲಿ ಮಾತ್ರವಲ್ಲ , ಯಡಿಯೂರಪ್ಪ ,ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರ ಕಾಲದಲ್ಲೂ ನಡೆದಿದೆ.ನನ್ನ ಕಾಲದಲ್ಲೂ ನಡೆದಿದೆ.ಈಗಲೂ ನಡೆಯುತ್ತದೆ.ಮುಂದಿನ ಸರ್ಕಾರ ಬಂದಾಗಲೂ ನಡೆಯುತ್ತದೆ ಎಂದರು.

          ಹಾಗೆ ನೋಡಿದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 22,187 ಕೋಟಿ ರೂಗಳಷ್ಟು ಹಣ ಹೊಂದಿಕೆಯಾಗುತ್ತಿರಲಿಲ್ಲ. ಅದೇ ರೀತಿ ಸದಾನಂದಗೌಡರು ಸಿಎಂಆಗಿದ್ದ ಕಾಲದಲ್ಲಿ ಇದು ಹೆಚ್ಚಾಯಿತು. ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಇದು 38,443 ಕೋಟಿ ರೂಗಳಿಗೇರಿತು.

          ಆದರೆ ನಾನು ಮುಖ್ಯಮಂತ್ರಿಯಾದ ನಂತರ ಇದರ ಪ್ರಮಾಣ ಕಡಿಮೆಯಾಗುತ್ತಾ ಬಂದು ಅನುಕ್ರಮವಾಗಿ ಮೂವತ್ತೊಂಭತ್ತು, ಹದಿನೇಳು, ಹತ್ತೊಂಭತ್ತು ಪರ್ಸೆಂಟಿಗಿಳಿಯಿತು. ಸಹಜವಾಗಿ ಇದನ್ನು ಸಿಎಜಿ ವರದಿಯಲ್ಲಿ ನಮೂದಿಸುತ್ತಾರೆ.

         ಆದರೆ ಇವರು ತಮ್ಮ ಕಾಲದಲ್ಲಿ ಏನಾಯಿತು? ಅನ್ನುವುದನ್ನು ಮುಚ್ಚಿಟ್ಟು 2016-17 ರ ಸಿಎಜಿ ವರದಿಯನ್ನು ಮಾತ್ರ ಏಕೆ ಮುಂದಿಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಅವರು,ಈ ವಿಷಯದಲ್ಲಿ ಬಿಜೆಪಿಯವರು ದಡ್ಡರೇನಲ್ಲ.ಹಾಗಂತಲೇ ವಸ್ತುಸ್ಥಿತಿಯನ್ನು ಮುಚ್ಚಿಟ್ಟು ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.

         ಯಾವ ಸರ್ಕಾರಗಳು ಬಂದರೂ ಬಜೆಟ್‍ನಲ್ಲಿ ಇಡುವ ಹಣ ಸಂಪೂರ್ಣವಾಗಿ ಬಳಕೆಯಾಗುವುದಿಲ್ಲ.ಇದಕ್ಕೆ ಹಲವಾರು ಕಾರಣಗಳಿರುತ್ತವೆ.ಮುಂದೆ ಸಿಎಜಿ ಕೂಡಾ ಅದನ್ನು ಕರೆಕ್ಷನ್ ಮಾಡುತ್ತಾರೆ ಎಂದು ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link