ದಾವಣಗೆರೆ:
ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಉಪ ಕಾರ್ಯದರ್ಶಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ದಾವಣಗೆರೆ ಜಿಲ್ಲಾ ಪಂಚಾಯತ್ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ. ಹೀಗಾಗಿ ಇಡೀ ಪಂಚಾಯತ್ನ ಎಲ್ಲಾ ಇಲಾಖೆಗಳನ್ನು ತನಿಖೆಗೆ ಒಳಪಡಿಸಬೇಕೆಂದು ಸ್ವತಃ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲಾ ಆಗ್ರಹಿಸಿದ್ದಾರೆ.
ಬುಧವಾರ ಜಿ.ಪಂ. ಅಧ್ಯಕ್ಷರ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಜಿ.ಎಸ್.ಷಡಾಕ್ಷರಪ್ಪ ಭಾರೀ ಭ್ರಷ್ಟಾಚಾರ ನಡೆಸಿರುವುದಲ್ಲದೇ, ಅಧಿಕಾರ ದುರುಪಯೋಗ ಪಡೆಸಿಕೊಂಡು ಸ್ವಜನ ಪಕ್ಷಪಾತ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಜಿಲ್ಲೆಯ 6 ತಾಲೂಕುಗಳ 247 ಗ್ರಾಮ ಪಂಚಾಯತ್ಗಳ ಪೈಕಿ 233 ಗ್ರಾಮ ಪಂಚಾಯತ್ಗಳಲ್ಲಿ ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ 14ನೇ ಹಣಕಾಸು ಯೋಜನೆಯಡಿ ನಿಯಮ ಮೀರಿ ಹಾಗೂ ಕಾನೂನುಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಿರುವುದರಿಂದ 2016-17ನೇ ಸಾಲಿನ ವರೆಗೂ ಸುಮಾರು 254.14 ಕೋಟಿ ರೂ. ಅವ್ಯವಹಾರ ನಡೆದಿರುವುದು ಪ್ರತಿ ವರ್ಷ ಸರ್ಕಾರದಿಂದ ಆಡಿಟ್ ನಡೆಸುವ ಸ್ಥಳೀಯ ಲೆಕ್ಕ ಪರಿಶೋಧನ ವರ್ತುಲ ತನಿಖಾ ವರದಿಯಲ್ಲಿ ಪತ್ತೆಯಾಗಿದ್ದು, ಈ ಅವ್ಯವಹಾರದ ಹಿಂದೆ ಅಶ್ವತಿ ಹಾಗೂ ಷಡಾಕ್ಷರಪ್ಪನವರ ಕೈವಾಡವಿದೆ ಎಂದು ಆಪಾದಿಸಿದರು.
182 ಗ್ರಾಮ ಪಂಚಾಯತ್ಗಳ ಇಂಜೀನಿಯರ್ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಗ್ರಾಮ ಪಂಚಾಯತ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಅವ್ಯವಹಾರದ ಆರೋಪ ಬಂದ ಸಂದರ್ಭದಲ್ಲಿ ಇಲ್ಲಿಯ ಸ್ಥಳೀಯ ಅಧಿಕಾರಿಗಳನ್ನು ತನಿಖೆಗೆ ನೇಮಿಸಿ, ಜನರ ಕಣ್ಣೀರು ಒರೆಸಲಿಕ್ಕಾಗಿ ಆಪಾರದನೆಗೆ ಒಳಗಾಗಿರುವ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು, ಲಕ್ಷಾಂತರ ರೂ.
ಹಣವನ್ನು ಲಂಚ ರೂಪದಲ್ಲಿ ಪಡೆದು ಮತ್ತೆ ಆ ಅಧಿಕಾರಿಗಳನ್ನು ಕೆಲಸಕ್ಕೆ ನಿಯೋಜಿಸಿಕೊಂಡು ಭ್ರಷ್ಟಾಚಾರ ಪ್ರಕರಣಗಳನ್ನು ಇವರಿಬ್ಬರೂ ಮುಚ್ಚಿ ಹಾಕಿದ್ದಾರೆಂದು ದೂರಿದರು.
ಬೇಕಾದ ಅಧಿಕಾರಿಗಳನ್ನು ಹಾಗೂ ಪಿಡಿಒ ಅವರನ್ನು ಆಯಕಟ್ಟಿನ ಜಾಗದಲ್ಲಿ ನಿಯೋಜಿಸಿಕೊಂಡು, ಅವರಿಂದ ಗಿಮ್ಮಳ ಪಡೆದು, ಹೆಚ್ಚು ಅನುದಾನವನ್ನು ಹಾಕಿಕೊಟ್ಟಿರುವ ಕಾರಣ ಕೆಲವೇ ಗ್ರಾಮ ಪಂಚಾಯತ್ಗಳಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹನುಮಂತಾಪುರ ಗ್ರಾ.ಪಂ.ನ ಪಿಡಿಒ ಲೋಹಿತ್ ಕುಮಾರ್ 14ನೇ ಹಣಕಾಸು ಯೋಜನೆ ಅನುದಾನ ದುರೂಪಯೋಗ ಪಡೆಸಿಕೊಂಡಿರುವುದು, ತೋಳಹುಣಸೆ ಪಿಡಿಒ ಸವಿತಾ ಬಾಯಿ ನಿಯಮ ಬಾಹೀರವಾಗಿ ಇ-ಸ್ವತ್ತು ನೀಡಿರುವುದು, ದಿದ್ದಿಗೆ ಗ್ರಾ.ಪಂ. ಪಿಡಿಒ ಎ.ಟಿ.ನಾಗರಾಜ್ ಗ್ರಾಮ ವಿಕಾಸ ಯೋಜನೆಯಡಿ ನಿಯಮ ಉಲ್ಲಂಘಿಸಿ 6.64 ಲಕ್ಷ ಮೌಲ್ಯದ ಸಿಮೆಂಟ್ ಖರೀದಿಸಿರುವುದು ಸೇರಿದಂತೆ ಹಲವು ಅವ್ಯವಹಾರ ನಡೆದಿವೆ ಎಂದು ಅವರು ವಿವರಿಸಿದರು.
ನಿಯಮದ ಪ್ರಕಾರ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಯಂತ್ರೋಪಕರಣ ಖರೀದಿ ಹಾಗೂ ಯಂತ್ರಗಳಿಂದ ಕಾಮಗಾರಿ ಮಾಡಿಸಲು ಪ್ರತಿವರ್ಷ ಒಬ್ಬ ಗುತ್ತಿಗೆದಾರನಿಗೆ 35 ಲಕ್ಷ ರೂ. ವರೆಗೆ ಮಾತ್ರ ನೀಡಲು ಅವಕಾಶವಿದೆ. ಆದರೆ, ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಮತ್ತು ಕಾರಿಗನೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ ಗುತ್ತಿಗೆದಾರ ಜಿ.ಎಸ್.ಜಯಪ್ಪ ಎಂಬುವರ ಖಾತೆಗೆ 1.82 ಕೋಟಿ ರೂ, ಇನ್ನೋರ್ವ ಗುತ್ತಿಗೆದಾರ ಮುರಿಗೇಂದ್ರಪ್ಪ ಎಂಬುವರ ಖಾತೆಗೆ 1.12 ಕೋಟಿ ಜಮೆ ಮಾಡಲಾಗಿದ್ದು, ಇದರಲ್ಲಿ ಅಶ್ವತಿ ಹಾಗೂ ಷಡಾಕ್ಷರಪ್ಪ ಪಾಲುದಾರರಾಗಿದ್ದಾರೆಂದು ಆಪಾದಿಸಿದರು.
ಸಿಇಒ ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಏಕ ಕಾಲಕ್ಕೆ ರಜೆ ಹಾಕಿ ಹೋಗುತ್ತಾರೆ. ಅದರಲ್ಲೂ ಸಿಇಒ ಒಂದು ತಿಂಗಳು ಸಹ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಸಾರ್ವಜನಿಕರ ಕುಂದು-ಕೊರತೆಗಳಿಗೆ ಸ್ಪಂದಿಸಿಲ್ಲ. ಇವರಿಂದ ಒಂದು ಕಡತ ಪುಟ್ಅಪ್ ಆಗಿ ಬರಬೇಕಾದರೆ, ಮೂರು ತಿಂಗಳ ವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








