ಚಿತ್ರದುರ್ಗ:
ರಾಮಮಂದಿರ ನಿರ್ಮಾಣ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಬಿಜೆಪಿ.ಗೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಇದು ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್ ಹರ್ಷ ವ್ಯಕ್ತಪಡಿಸಿದರು.
ವೇದಿಕೆಯ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಎಂ.ಹನೀಫ್ರವರು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ನಾಲ್ಕುವರೆ ವರ್ಷಗಳ ಕಾಲ ಸುಮ್ಮನಿದ್ದು, ಪಾರ್ಲಿಮೆಂಟ್ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ
ವಿಷಬೀಜ ಬಿತ್ತುತ್ತಿದೆ. ರಾಮಮಂದಿರ ನಿರ್ಮಾಣ ಮಾಡುವುದು ಬೇಡ ಎಂದು ಯಾವ ಮುಸಲ್ಮಾನರು ಹೇಳುತ್ತಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ನಮ್ಮ ಆಸೆ. ರಾಮನ ಮೇಲೆ ನಮಗೂ ಅಪಾರ ಭಕ್ತಿಯಿರುವುದರಿಂದ ರಾಮಮಂದಿರ ನಿರ್ಮಾಣಕ್ಕೆ ಕೈಲಾದ ನೆರವು ನೀಡುವುದಾಗಿ ಖುಷಿಯಿಂದ ಹೇಳಿದರು.
ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತಿಸ್ಗಡ, ತೆಲಂಗಾಣದಲ್ಲಿ ಬಿಜೆಪಿ.ಸೋಲಿಗೆ ಉತ್ತರಪ್ರದೇಶದ ಸಿ.ಎಂ.ಯೋಗಿ ಆದಿತ್ಯನಾಥ ಹಾಗೂ ಬಿಜೆಪಿಯ ಕೆಲವು ಏಜೆಂಟರುಗಳೇ ಕಾರಣ. ಮುಸ್ಲಿಂ ಮಹಿಳೆಯರ ತಲಾಖ್, ಶಬರಿಮಲೈಗೆ ಮಹಿಳೆಯರ ಪ್ರವೇಶ ಇವುಗಳನ್ನೆಲ್ಲಾ ಮುಂದಿಟ್ಟುಕೊಂಡು ದೇಶದ ಶಾಂತಿಯನ್ನು ಕದಡುತ್ತಿರುವ ಬಿಜೆಪಿ.ಯವರು ನಕಲಿ ಹಿಂದುತ್ವವಾದಿಗಳು ಎನ್ನುವ ಸತ್ಯ ಪಂಚರಾಜ್ಯಗಳ ಜನತೆಗೆ ಗೊತ್ತಾಗಿದ್ದರಿಂದ ಚುನಾವಣೆಯಲ್ಲಿ ಬಿಜೆಪಿ.ಗೆ ಮಣ್ಣುಮುಕ್ಕಿಸಿದ್ದಾರೆ. ಈಗಲಾದರೂ ದೇಶ ಹೊಡೆಯುವ ಕೆಲಸ ಮಾಡುವುದನ್ನು ನಿಲ್ಲಿಸಿ ಅಭಿವೃದ್ದಿಗೆ ಒತ್ತು ಕೊಡಲಿ ಎಂದು ಆಗ್ರಹಿಸಿದರು.
ಚುನಾವಣಾ ಪೂರ್ವದಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ. ವರ್ಷಕ್ಕೆ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ನಂಬಿಸಿದ ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಮಾಡಿದ ಸಾಧನೆಯೆಂದರೆ ನೋಟ್ಬ್ಯಾನ್, ಜಿ.ಎಸ್.ಟಿ., ಸಿಲಿಂಡರ್ ಬೆಲೆ ಏರಿಕೆ ಎಂದು ವ್ಯಂಗ್ಯವಾಡಿದರು.
ಒಂದು ಧರ್ಮದವರ ಮನಸ್ಸಿಗೆ ನೋವುಕೊಟ್ಟು ಸಂತಸ ಪಡುತ್ತಿದ್ದ ಬಿಜೆಪಿ.ಗೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಶಾಸ್ತಿಯಾಗಿದೆ. ರಾಮಮಂದಿರ ಕಟ್ಟಲು ನಮ್ಮದು ಬೆಂಬಲವಿದೆ. ನ್ಯಾಯಬದ್ದವಾದ ತೀರ್ಪು ಸಿಗುತ್ತದೆಂಬ ನಂಬಿಕೆಯಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷರುಗಳಾದ ಗುಡ್ಲಕ್ ಇಮ್ತಿಯಾಜ್, ರಹಮತ್ವುಲ್ಲಾ, ಸಂಘಟನಾ ಕಾರ್ಯದರ್ಶಿಗಳಾದ ಹೆಚ್.ಶಬ್ಬೀರ್ಭಾಷ, ಮಹಮದ್ ಶಫಿವುಲ್ಲಾ, ಪ್ರಧಾನ ಕಾರ್ಯದರ್ಶಿ ಅಸ್ನತ್ವುಲ್ಲಾ, ಅಲ್ಲಾವುದ್ದೀನ್, ಫೈರೋಜ್, ಅಫ್ರೋಜ್, ಬಾಬ್ಜಾನ್, ಅಸ್ಲಂ, ರಷೀದ್ಸಾಬ್, ಹೈದರಾಲಿಖಾನ್, ಭಕ್ಷಿ(ರಾಜ) ಮೊಹಸಿನ್ ಪಟೇಲ್, ಜಮೀಲ್ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ