ಶಿವಪೂಜೆ ಅವರನ್ನು ಬಿಟ್ಟರೂ ಶಿವಪೂಜೆಯನ್ನು ಸಿದ್ಧಗಂಗಾ ಶ್ರೀಗಳು ಬಿಡಬೇಕಲ್ಲ?
“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು”
ಇದು ನಮ್ಮ ರಾಷ್ಟ್ರಕವಿ ಕುವೆಂಪು ಉವಾಚ.
ನಮ್ಮ ಪೂಜ್ಯ ಸಿದ್ಧಗಂಗಾ ಶ್ರೀಗಳವರ ಪರಮಪೂಜ್ಯ ಬದುಕಿನ ಧ್ಯೇಯವಾಕ್ಯ.
“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಶಿವಪೂಜೆಯಾಗಿರು”
ಒಂದಷ್ಟು, ಒಂದು ಚೂರು ನೆಗಡಿ, ಕೆಮ್ಮು, ಜ್ವರ ಬರುತ್ತಲೇ
ಶಿವಪೂಜೆಯನ್ನೇ “ಬಾಯ್ಕಾಟ್” ಮಾಡುವ
ಸದ್ಯ ಪರಸ್ಪರ ಕೌರವ, ಪಾಂಡವರಂತೆ ಕಿತ್ತಾಡಿಕೊಳ್ಳುತ್ತಿರುವ
ನಮ್ಮ ವೀರಶೈವ, ಲಿಂಗಾಯತರು ಪೂಜ್ಯ ಸಿದ್ಧಗಂಗಾ ಶ್ರೀಗಳವರ
ಶಿವಪೂಜಾ ನಿಷ್ಠೆಯನ್ನು ನೋಡಿ ಪಾಠಕಲಿತುಕೊಳ್ಳಬೇಕು.
ಉಸಿರಿಗಿಂತಲೂ ಹೆಚ್ಚು ಪ್ರೀತಿಸಿಕೊಂಡು ಬಂದ ಶಿವಪೂಜೆಯನ್ನು
ಸಿದ್ಧಗಂಗಾ ಶ್ರೀಗಳು ಆಸ್ಪತ್ರೆಯಲ್ಲಿದ್ದ ಮಾತ್ರಕ್ಕೆ ಬಿಡುವುದು ಸಾಧ್ಯವೇ?
ಅವರು ದೇವರಿಗೆ ಹೇಳಿಬಂದಿದ್ದಾರೆ.
ಏನಿದ್ದರೂ ಮೊದಲು ಶಿವಪೂಜೆ, ನಂತರ ಉಸಿರು
ತದನಂತರ ಉಳಿದೆಲ್ಲ ಬದುಕು, ಅದು, ಇದು, ಸಾಧನೆ…ಇತ್ಯಾದಿ.
ಪೂಜ್ಯರ ಆರೋಗ್ಯ, ನಮ್ಮೆಲ್ಲರ ಭಾಗ್ಯ.
ಅವರ ದಿವ್ಯಸಾನಿಧ್ಯ, ನಮ್ಮೆಲ್ಲರ ಸಾಯುಜ್ಯ.
ಪೂಜ್ಯ ಶ್ರೀ ಸಿದ್ಧಗಂಗಾ ಶ್ರೀಗಳು ಬರೀ ನಡೆದಾಡುವ ದೇವರಷ್ಟೇ ಅಲ್ಲ.
ಅವರು ನಡೆದಾಡುವ ದಾಸೋಹ ಪರ್ವ, ದಾಸೋಹ ವಿಸ್ಮಯ.
ಪೂಜ್ಯ ಶ್ರೀ ಶ್ರೀ ಸಿದ್ಧಗಂಗಾ ಶ್ರೀಗಳು ಬೇಗನೇ ಚೇತರಿಸಿಕೊಳ್ಳಲಿ.
– ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
