ಬೆಂಗಳೂರು
ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಗಾರೆ ಕೆಲಸಗಾರರೊಬ್ಬರು ಮೃತಪಟ್ಟಿರುವ ದುರ್ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮಾಳಗಾಳದ ವೆಂಕಟರಾಮಪ್ಪ (45)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಅಪಘಾತದಲ್ಲಿ ಗಾಯಗೊಂಡಿರುವ ಬೈಕ್ ಸವಾರ ಡ್ಯಾನಿಯಲ್ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಾರೆ ಕೆಲಸ ಮಾಡುತ್ತಿದ್ದ ವೆಂಕಟರಾಮಪ್ಪ ಅವರು ರಾತ್ರಿ 8.45ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸುಮನಹಳ್ಳಿ ಬಳಿ ವೇಗವಾಗಿ ಬುಲೆಟ್ ಬೈಕ್‍ನಲ್ಲಿ ಬಂದು ಡ್ಯಾನಿಯಲ್ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.ಡಿಕ್ಕಿ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ವೆಂಕಟರಾಮಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಸಾರಾ ಫಾತೀಮಾ ತಿಳಿಸಿದ್ದಾರೆ.
ವೃದ್ಧೆ ಸಾವು
ಕನಕನಗರದ 4ನೇ ಕ್ರಾಸ್ ಬಳಿ ಸೋಮವಾರ ರಾತ್ರಿ 10.30ರ ವೇಳೆ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರು ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಕನಕ ನಗರದ ಕಲ್ಯಾಣಿ (70) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಅಪಘಾತವೆಸಗಿ ಪರಾರಿಯಾಗಿರುವ ಬೈಕ್ ಚಾಲಕನಿಗಾಗಿ ಪ್ರಕರಣ ದಾಖಲಿಸಿರುವ ಕೆಜಿ ಹಳ್ಳಿ ಸಂಚಾರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಟೈಲರ್ ಸಾವು
ಹೆಬ್ಬಾಳ ಕೆಂಪಾಪುರದ ಪ್ಯಾರಾರೆಜಿಮೆಂಟ್‍ನ ಮಿಲಿಟರಿ ಕ್ಯಾಂಪಸ್‍ನಲ್ಲಿ ಮಿಲಿಟರಿ ವಾಹನ ಡಿಕ್ಕಿ ಹೊಡೆದು ಉತ್ತರ ಪ್ರದೇಶ ಮೂಲದ ಲಾಲ್‍ಚಂದ್ (50) ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಕ್ಯಾಂಪಸ್‍ನಿಂದ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದ್ದು, ಮಿಲಿಟರಿ ವಾಹನ ಚಾಲಕನನ್ನು ಬಂಧಿಸಿರುವ ಹೆಬ್ಬಾಳ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಸಾರಾ ಫಾತೀಮಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








