ಚಳ್ಳಕೆರೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿಗಳು ತಮ್ಮ ಮತ ಕ್ಷೇತ್ರ ವ್ಯಾಪ್ತಿಯ 18ನೇ ವಯಸ್ಸಿನ ಪ್ರೌಢ ಮತದಾರರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಯಲ್ಲಿ ಯಾವುದೇ ನಿರ್ಲಕ್ಷ್ಯೆ ತೋರಬಾರದು. ಯಾವುದೇ ಕಾರಣಕ್ಕೂ ಪ್ರೌಢ ಮತದಾರರು ಮತದಾನದಿಂದ ವಂಚಿತರಾಗದಂತೆ ಜಾಗ್ರತೆ ವಹಿಸಬೇಕೆಂದು ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದರು.
ಅವರು, ಶನಿವಾರ ಇಲ್ಲಿನ ಬಳ್ಳಾರಿ ರಸ್ತೆಯ ಪದ್ಮ ಖಾಸಗಿ ಚಿತ್ರಮಂದಿರದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಮತದಾರ ಪಟ್ಟಿ ಸೇರ್ಪಡೆ ಕುರಿತದಂತೆ ಏರ್ಪಡಿಸಲಾಗಿದ್ದ ಮಾಹಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಚುನಾವಣಾ ಆಯೋಗ ಈಗಾಗಲೇ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಅವಶ್ಯಕವಾಗಿ ಬೇಕಾಗಿರುವ ಮತದಾರರ ಪಟ್ಟಿ ಪರೀಕ್ಷರಣೆ ಕಾರ್ಯದಲ್ಲಿ ನಿರತವಾಗಿದೆ.
ಈಗಾಗಲೇ ಎರಡ್ಮೂರು ಬಾರಿ ಸಭೆ ನಡೆಸಿ ಮತಗಟ್ಟೆ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿಯನ್ನು ನೀಡಿದರೂ ಸಹ ಇನ್ನೂ ಕೆಲವೆಡೆ ಲೋಪದೋಷಗಳು ಕಂಡು ಬರುತ್ತಿವೆ. ಮತಗಟ್ಟೆ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಮತಗಟ್ಟೆ ಅಧಿಕಾರಿಗಳು ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಿದ ಸೇರ್ಪಡೆ, ತಿದ್ದುಪಡಿ, ಹೆಸರು ಬದಲಾವಣೆ, ಮತಗಟ್ಟೆ ಕ್ಷೇತ್ರ ಬದಲಾವಣೆ, ಮತಗಟ್ಟೆ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳ ಮಾಹಿತಿ, ಅಂಗವಿಕಲರ ಮಾಹಿತಿ ಮುಂತಾದವುಗಳನ್ನು ನಿಖರವಾಗಿ ನೀಡಬೇಕು. ಮತಗಟ್ಟೆ ಅಧಿಕಾರಿ ಲೋಪವೆಸಗಿದಲ್ಲಿ ಅದು ಇಡೀ ಚುನಾವಣೆಯ ಮತದಾನದ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಪಾಠದ ಜೊತೆಗೆ ಮಹತರವಾದ ಚುನಾವಣಾ ಕಾರ್ಯದಲ್ಲೂ ಸಹ ತೊಡಗಿದ್ದೀರ. ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲೂ ಸಹ ವಿವಿಧ ರೀತಿಯ ಯೋಜನೆಗಳ ಜಾರಿಯಲ್ಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಪರಿಪಕ್ವವಾದ ಬೋಧನೆ ಅವನ ಕ್ರೀಯಾಶೀಲ ಚಟುವಟಿಕೆಯ ಬಗ್ಗೆ ಶಿಕ್ಷಕರು ಗಮನಹರಿಸಬೇಕಿದೆ. ಆದರೆ, ಮತದಾರರ ಪಟ್ಟಿ ಕಾರ್ಯದಲ್ಲೂ ಸಹ ನೀವು ತೊಡಗಿದ್ದು, ಈ ಕಾರ್ಯಕ್ರಮವನ್ನು ಸಹ ಗಂಭೀರತೆಯಿಂದ ಪರಿಗಣಿಸಿ ಕಾರ್ಯನಿರ್ವಹಿಸಬೇಕು. ಚುನಾವಣಾ ಆಯೋಗದ ಯಾವುದೇ ಕಾರ್ಯದಲ್ಲಿ ನಿರ್ಲಕ್ಷ್ಯೆ ಸಲ್ಲದು ಎಂದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಹಲವಾರು ಬಗೆಯ ಚುನಾವಣೆಗಳ ಮೇಲಿಂದ ಮೇಲೆ ನಡೆಯುತ್ತಿದ್ದು, ಮತಗಟ್ಟೆ ಅಧಿಕಾರಿಗಳಿಗೆ ಹೆಚ್ಚು ಕೆಲಸದ ಒತ್ತಡದ ನಡುವೆಯೂ ಈ ಕಾರ್ಯವನ್ನು ಪಾರದರ್ಶಕವಾಗಿ ನಿರ್ವಹಿಸಬೇಕಿದೆ. ಕಾರಣ ಮತಗಟ್ಟೆ ಕೇಂದ್ರಗಳಲ್ಲಿಯೇ ನೀವು ಕಾರ್ಯನಿರ್ವಹಿಸುವುದರಿಂದ ಅಲ್ಲಿನ ಸಾದಕ ಬಾಧಕಗಳ ಬಗ್ಗೆ ನಿಮಗೆಹೆಚ್ಚು ಮಾಹಿತಿ ಇರುತ್ತದೆ. ಶಿಕ್ಷಕ ಸಮೂಹ ಮಕ್ಕಳ ಜ್ಞಾನಾರ್ಜನೆಯ ಜೊತೆಯಲ್ಲಿ ಈ ಮಹತರ ಕಾರ್ಯ ಮಾಡುವ ಮೂಲಕ ಯಾವುದೇ ರೀತಿಯ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಮಲ್ಲಿಕಾರ್ಜುನಪ್ಪ, ಚುನಾವಣ ಇಲಾಖೆಯ ಪ್ರಕಾಶ್, ನಾಗರಾಜು, ಡಿ.ಶ್ರೀನಿವಾಸ್, ಸುಲೇಮಾನ್, ನಗರಸಭೆ ಕಂದಾಯಾಧಿಕಾರಿ ವಿ.ಈರಮ್ಮ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








