ಶಿರಾ
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಗ್ರಾಮ ಲೆಕ್ಕಿಗನನ್ನು ಅಕ್ರಮ ಮರಳು ದಂಧೆಕೋರರು ಹತ್ಯೆ ಮಾಡಿರುವುದನ್ನು ಖಂಡಿಸಿ ಶಿರಾ ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘ ಹಾಗೂ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಒಂದು ದಿನದ ಮಟ್ಟಿಗೆ ಕಚೇರಿಯ ಕೆಲಸಗಳಿಗೆ ರಜೆ ಹಾಕಿ ನಗರದ ಸರ್ಕಾರಿ ನೌಕರರ ಸಂಘದ ಕಛೇರಿಯಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆಯಲ್ಲಿ ತೆರಳಿದ ಕಂದಾಯ ಇಲಾಖಾ ನೌಕರರು ತಹಸೀಲ್ದಾರ್ ಕಚೆರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಕಂದಾಯ ಇಲಾಖೆಯ ಸಹಾಯಕ ಚುನಾವಣಾಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಕರ್ತವ್ಯ ನಿರ್ವಹಿಸುತ್ತಿದ್ದ ಅಮಾಯಕ ನೌಕರನ ಮೇಲೆ ಲಾರಿ ಹರಿಸಿ ಹತ್ಯೆ ಮಾಡಲಾಗಿದೆ. ಈ ಕೂಡಲೆ ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸದರಿ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅಕ್ರಮ ಮರಳು ದಂಧೆಯಲ್ಲಿ ತೊಡಗಿದ ಹಾಗೂ ಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಅಗತ್ಯ ಎಂದರು.
ಕಂದಾಯ ಇಲಾಖಾ ನೌಕರರ ಸಂಘದ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಕಂದಾಯ ಇಲಾಖಾ ನೌಕರರ ಮೇಲೆ ರಾಜ್ಯಾದ್ಯಂತ ಇಂತಹ ಪ್ರಕರಣಗಳು ನಡೆಯುತ್ತಿದ್ದು ಮೃತ ಸಾಹೇಬ್ ಪಟೇಲ್ ಕುಟುಂಬಕ್ಕೆ ಕೂಡಲೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಸಂಘದ ಖಜಾಂಚಿ ಅಂಜನ್‍ಕುಮಾರ್, ಸಂಘಟನಾ ಕಾರ್ಯದರ್ಶಿ ಸುದರ್ಶನ್, ಅಧ್ಯಕ್ಷರಾದ ಸುನೀಲ್‍ಕುಮಾರ್, ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷ ರಂಗನಾಥ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








