ಅಧ್ಯಕ್ಷರು, ಉಪಾಧ್ಯಕ್ಷರಿಂದ ದಾಖಲೆ ಕೇಳಿದ ಬಿಜೆಪಿ

ದಾವಣಗೆರೆ

          ಜಿ.ಪಂ. ಅಧ್ಯಕ್ಷರು ಯಾವ ಆಧಾರದ ಮೇಲೆ ಸಿಇಒ ಹಾಗೂ ಉಪ ಕಾರ್ಯದರ್ಶಿಯ ವಿರುದ್ಧ ದೂರು ದಾಖಲಿಸಿದ್ದಾರೆ ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಯಾವ ಆಧಾರದ ಮೇಲೆ ಅಧ್ಯಕ್ಷರ ಆರೋಪವನ್ನು ನಿರಾಕರಿಸಿದ್ದಾರೆಂಬುದರ ಬಗ್ಗೆ ದಾಖಲೆ ಸಲ್ಲಿಸುವಂತೆ ಉಭಯರಿಗೂ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.

          ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲಾ ಸಿಇಒ ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಷಡಾಕ್ಷರಪ್ಪನವರ ವಿರುದ್ಧ ಎಸಿಬಿಗೆ ದೂರು ನೀಡಿರುವ ಬಗ್ಗೆ ಹಾಗೂ ಈ ದೂರನ್ನು ಬೆಂಬಲಿಸುವುದಿಲ್ಲ ಎಂಬುದಾಗಿ ಉಪಾಧ್ಯಕ್ಷರು, ಸದಸ್ಯರು ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಅಧ್ಯಕ್ಷರು, ಉಪಾಧ್ಯಕ್ಷರ ಹಾಗೂ ಸದಸ್ಯರ ಸಭೆ ನಡೆಸಿ, ಎಲ್ಲರ ಸಮಕ್ಷಮದಲ್ಲೇ ಚರ್ಚಿಸಿದ್ದೇವೆ ಎಂದರು.

           ಜಿಲ್ಲೆಯ 233 ಗ್ರಾಮ ಪಂಚಾಯತ್‍ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಾಗೂ 14ನೇ ಹಣಕಾಸು ಯೋಜನೆಯಡಿಯಲ್ಲಿ ಸುಮಾರು 254 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಜಿ.ಪಂ. ಸಿಇಒ ಎಸ್.ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಜಿ.ಎಸ್.ಷಡಾಕ್ಷಪ್ಪ ಭಾಗವಹಿಸಿದ್ದಾರೆಂಬುದಾಗಿ ಆರೋಪಿಸಿ ಹಾಗೂ ಸಮಗ್ರ ತನಿಖೆಗೆ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಎಸಿಬಿಗೆ ದೂರು ನೀಡುವ ಮುನ್ನ ಜಿ.ಪಂ. ಉಪಾಧ್ಯಕ್ಷರು, ಸದಸ್ಯರು, ಜಿಲ್ಲೆಯ ಪಕ್ಷದ ಮುಖಂಡರ ಗಮನಕ್ಕೆ ತರದಿರುವ ಪ್ರಶ್ನಿಸಲಾಗಿದೆ ಹಾಗೂ ಆರೋಪ ಮಾಡಿರುವ ಬಗ್ಗೆ ದಾಖಲೆ ಸಲ್ಲಿಸುವಂತೆ ಜಿ.ಪಂ. ಉಪಾಧ್ಯಕ್ಷೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

           ಅಲ್ಲದೇ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಾಡಿರುವ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿ, ಅಧಿಕಾರಿಗಳ ಬೆಂಬಲಕ್ಕೆ ನಿಂತಿರುವ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಹಾಗೂ ಸದಸ್ಯರು ಯಾವ ಆಧಾರದ ಮೇಲೆ, ಆರೋಪ ನಿರಾಕರಿಸಿದ್ದೀರಿ. ಅಧಿಕಾರಿಗಳು ಭ್ರಷ್ಟಾಚಾರ ಮಾಡದಿರುವ ಬಗ್ಗೆ ದಾಖಲೆ ಇದ್ದರೆ ಕೊಡಿ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಯಾವುದೇ ಕಾರಣಕ್ಕೂ ವ್ಯತಿರಿಕ್ತವಾಗಿ ಮಾತನಾಡದಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

          ಉಭಯದವರು ದಾಖಲೆ ನೀಡಿದ ಬಳಿಕ ನಾನೇ ಮಾಧ್ಯಮಗಳ ಎದುರು ಬಂದು, ನಾನೇ ಸುದ್ದಿಗೋಷ್ಠಿ ನಡೆಸಿ, ಭ್ರಷ್ಟಾಚಾರ ನಡೆದಿದೆಯೋ, ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link