ಜನರಿಗೆ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರ: ಭಾರತಿ ತಿಮ್ಮಾರೆಡ್ಡಿ

ಬಳ್ಳಾರಿ

       ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು,ಅವುಗಳಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರು ಸಮಾಜಸುಧಾರಕರ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಪ್ರಶಂಸೆ ವ್ಯಕ್ತಪಡಿಸಿದರು.

         ವಿಜಯನಗರ ವೈದ್ಯಕೀಯ ಸಂಸ್ಥೆ(ವಿಮ್ಸ್),ಕರ್ನಾಟಕ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿ ತಾಲೂಕಿನ ಕಪ್ಪಗಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸಸಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

         ಪತ್ರಕರ್ತರು ಸಮಾಜಸುಧಾಕರಿದ್ದಂತೆ ವಿವಿಧ ವಿಷಯಗಳ ಕುರಿತು ಹಾಗೂ ಸರಕಾರದ ವಿವಿಧ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸುವುದರ ಮೂಲಕ ಅವರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ಹಾಗೂ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗುವಂತೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

          ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದರ ಜತೆಗೆ ಉಚಿತ ಆರೋಗ್ಯ ತಪಾಸಣೆ, ಸಸಿಗಳ ವಿತರಣೆ,ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಸರಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದ್ದು,ಮುಂದಿನ ದಿನಗಳಲ್ಲಿ ಇನ್ನಷ್ಟು ರಚನಾತ್ಮಕವಾಗಿ ಹೆಚ್ಚೆಚ್ಚು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಲಿ ಎಂದು ಅವರು ಆಶಿಸಿದರು.

          ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ ಅವರು ಮಾತನಾಡಿ, ಬಿಸಿಲೂರು ಬಳ್ಳಾರಿ ಅಂತ ಕರೆಯಿಸಿಕೊಳ್ಳುವುದರ ಬದಲು ಹಸಿರು ಬಳ್ಳಾರಿ ಅಂತ ಕರೆಯಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಡಿ ಮತ್ತು ಅವುಗಳನ್ನು ಪೋಷಿಸಿ ಇತರರಿಗೆ ಮಾದರಿಯಾಗಿ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೇಳಿದರು.

           ಶಾಲಾ ಮಕ್ಕಳು ಸಸಿಗಳನ್ನು ನೆಡುವುದರ ಜತೆಗೆ ಶಾಲೆಯಲ್ಲಿ ಇರುವಷ್ಟು ದಿವಸ ಆ ಗಿಡದ ಸಂಪೂರ್ಣ ಜವಾಬ್ದಾರಿ ತಮ್ಮದೇ ಅದನ್ನು ತುಂಬಾಗಿ ಚೆನ್ನಾಗಿ ಪೋಷಿಸಿ ಬೆಳೆಸಿ ಮತ್ತು ಕಿರಿಯರಿಗೆ ತಾವು ರೋಲ್‍ಮಾಡಲ್ ಆಗಿ ಎಂದು ಮಕ್ಕಳನ್ನು ಹುರಿದುಂಬಿಸಿದರು.
ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮಾಧ್ಯಮಗಳು ವಹಿಸುತ್ತಿರುವ ಜವಾಬ್ದಾರಿಗಳ ಕುರಿತು ಕೆಲ ವಿಷಯಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ ಅಧ್ಯಕ್ಷತೆ ವಹಿಸಿದ್ದರು.

            ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಿ.ರಾಮಣ್ಣ, ಉಪಾಧ್ಯಕ್ಷೆ ಕೋಟೆ ಈರಮ್ಮ, ಡಿಎಚ್‍ಒ ಡಾ.ಶಿವರಾಜ ಹೆಡೆ, ಜಿಲ್ಲಾ ಶಸ್ತ್ರಚಿಕಿತ್ಸಕ ತಜ್ಞ ಡಾ.ಎನ್.ಬಸರೆಡ್ಡಿ, ವಿಮ್ಸ್ ನಿರ್ದೇಶಕ ಡಿ.ಕೃಷ್ಣಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ತಾಪಂ ಉಪಾಧ್ಯಕ್ಷೆ ಪುಷ್ಪಾವತಿ ಸುರೇಶ, ಡಿಡಿಪಿಐ ಶ್ರೀಧರನ್, ಲೋಕೋಪಯೋಗಿ ಎಇಇ ನಾಗದೇವ, ತಾಪಂ ಇಒ ಜಾನಕಿರಾಮ್, ತಾಲೂಕು ಸಾಕ್ಷರತಾ ಸಂಯೋಜಕ ಜಿ.ಶಿವಶಂಕರ, ಮುಖಂಡರಾದ ಮೀನಳ್ಳಿ ತಾಯಣ್ಣ, ವೆಂಕಟೇಶ ಪ್ರಸಾದ್, ಪಿಡಿಒ ರೂಪಾ, ಎಸ್‍ಡಿಎಂಸಿ ಅಧ್ಯಕ್ಷೆ ಪವಿತ್ರಾ ಮತ್ತಿತರರು ಇದ್ದರು.ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಬಜಾರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.

         ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು. ಡೊಳ್ಳು ಕುಣಿತ,ತಾಷಾ ಮತ್ತು ರಾಂಡೋಲ್ ಸಾಂಸ್ಕತಿಕ ಕಾರ್ಯಕ್ರಮ ಗಮನಸೆಳೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link