ಹೊಸಪೇಟೆ :
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸಲು ಹೊರಟ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರನ್ನು ಇಲ್ಲಿನ ಚಲುವಾದಿಕೇರಿ ಹಾಗು ಎಸ್‍ಆರ್‍ಆರ್ ನಗರದ ಜನ ಅವರನ್ನು ತಡೆದು ‘ಬಿಜೆಪಿ ಚೋರ್ ಹೈ, ಮೋದಿ ಚೋರ್ ಹೈ ಎಂದು ಧಿಕ್ಕಾರ ಕೂಗಿ ವಾಪಾಸ್ ಕಳಿಸಿದ ಘಟನೆ ಸೋಮವಾರ ನಡೆದಿದೆ.
ಸಿಎಎ ಪರ ಇಲ್ಲಿನ ಚಲುವಾದಿಕೇರಿಯ ಓಣಿಗಳಲ್ಲಿ ಬೆಳಿಗ್ಗೆಯೇ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು ತೆರಳಿದ್ದರು. ಬಿಜೆಪಿಯವರು ಬರುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿನ ನಿವಾಸಿಗಳು ಚಲುವಾದಿಕೇರಿ ಮುಖ್ಯದ್ವಾರದ ಬಳಿ ಜಮಾಯಿಸಿ ಗೋ ಬ್ಯಾಕ್, ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಬಿಜೆಪಿ, ಆರ್‍ಎಸ್‍ಎಸ್ ಅಜಾದಿ, ಹಿಂದುಸ್ತಾನ್ ಜಿಂದಾಬಾದ್, ಸಂವಿಧಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.
ಇದರಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ತೀವ್ರ ಮುಖಭಂಗ ಉಂಟಾಗಿ “ ನಾವು ಕರಪತ್ರ ಹಂಚಲು ಬಂದಿದ್ದೇವೆ. ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರೂ ಕ್ಯಾರೇ ಎನ್ನದೇ, ನೀವು ಇಲ್ಲಿಗೆ ಬರೋದೇ ಬೇಡ. ನಿಮ್ಮನ್ನು ಬಿಟ್ಟುಕೊಳ್ಳುವುದಿಲ್ಲ ಹೋಗಿ. ದಲಿತರು, ಮುಸ್ಲಿಮರು ಅಣ್ಣ ತಮ್ಮರಂತೆ ಇದ್ದೇವೆ. ಈ ದೇಶ ನಮ್ಮದು. ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ನೀವು ಇಲ್ಲಿಗೆ ಬಂದು ಬೆಂಕಿ ಹಚ್ಚೋ ಕೆಲಸ ಮಾಡಬೇಡಿ. ನಮಗೆ ಯಾವ ಸಿಎಎ, ಎನ್‍ಆರ್‍ಸಿ ಬೇಡ. ನೀವು ಇಲ್ಲಿಂದ ಮೊದಲು ಹೊರಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಏನು ಮಾಡಿದರೂ ಇಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ಅರಿತ ಬಿಜೆಪಿ ಮುಖಂಡರು ವಿಧಿಯಿಲ್ಲದೇ ವಾಪಾಸ್ ಮನೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಎಸ್‍ಆರ್‍ಆರ್ ನಗರದಲ್ಲಿ ಮಹಿಳಾ ಮುಖಂಡರಿಗೂ ಸುತ್ತುವರಿದು ನಿರ್ಬಂಧ :
ಬೆಳಿಗ್ಗೆ ಎಸ್‍ಆರ್‍ಆರ್ ನಗರಕ್ಕೆ ಸಿಎಎ ಪರ ಕರಪತ್ರ ಹಂಚಲು ಹೋದ ಮಹಿಳಾ ಮುಖಂಡರಾದ ಕವಿತಾಸಿಂಗ್ ಸೇರಿದಂತೆ ಇತರೆ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಅಲ್ಲಿನ ನಿವಾಸಿಗಳು ವಾರ್ಡಿಗೆ ಪ್ರವೇಶಿಸಿದಂತೆ ತಡೆದರು.
ಬಿಜೆಪಿ ಚೋರ್ ಹೈ ಎಂದು ಘೋಷಣೆಗಳನ್ನು ಕೂಗುತ್ತಾ, ಬಂದವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿದರು. ಹಿಂದುಸ್ಥಾನ ಜಿಂದಾಬಾದ್ ಎಂದು ಹೇಳುತ್ತಾ, ನಾವು ಯಾವ ದಾಖಲೆ ನೀಡಲ್ಲ. ನೀವು ಹೋಗಿ ಎಂದರು. ಇದರಿಂದ ವಿಚಲಿತರಾದ ಬಿಜೆಪಿ ಮಹಿಳಾ ಮುಖಂಡರು ಅಲ್ಲಿಂದ ಕಾಲ್ಕಿತ್ತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
