ಚಳ್ಳಕೆರೆ
ತಿಪ್ಪೇ ಮೇಲೆ ಹಾಕಿದ್ದ ಕ್ರಿಮಿನಾಶದ ಖಾಲಿ ಡಬ್ಬವನ್ನು ಮೂಸಿದ ಮೂವರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲ್ಲೂಕಿನ ತಳಕು ಹೋಬಳಿಯ ಅಜ್ಜನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಅಸ್ವಸ್ಥಗೊಂಡ ಮೂರೂ ಮಕ್ಕಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.
ಅಜ್ಜನಹಳ್ಳಿ ಗ್ರಾಮದ ರಾಘವೇಂದ್ರ ಎಂಬ ರೈತನ ಮಕ್ಕಳಾದ ಭಾವನ(6), ತರುಣ್(5), ಪ್ರಜ್ವಲ್(3) ಮಧ್ಯಾಹ್ನದ ಸಮಯದಲ್ಲಿ ಮನೆ ಹತ್ತಿರವಿರುವ ತಿಪ್ಪೆಯ ಮೇಲೆ ಬಿಳಿ ಬಾಟಲೊಂದು ಬಿದಿದ್ದನ್ನು ಕಂಡು ಇದು ಏನೋ ಸಿಹಿ ಜೂಸ್ ಎಂದು ಬಾವಿಸಿ ಮೂವರು ಮಕ್ಕಳು ಮೂಸಿದ್ದು ಕ್ರಿಮಿನಾಶದ ದುರ್ವಾಸನೆ ಮಕ್ಕಳಿಗೆ ಮೂಗಿನ ಮೂಲಕ ದೇಹ ಸೇರಿದ್ದರಿಂದ ದಿಢೀರನೆ ಅಸ್ವಸ್ಥಗೊಂಡ ಮಕ್ಕಳನ್ನು ತಳಕು ಆಸ್ಪತ್ರೆಗೆ ದಾಖಲಿಸಿ, ನಂತರ ಅಲ್ಲಿಂದ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಳಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ಧಾರೆ.
ಈ ಬಗ್ಗೆ ಮಾಹಿತಿ ನೀಡಿದ ತಂದೆ ರಾಘವೇಂದ್ರ, ಎಂದಿನಂತೆ ಮಕ್ಕಳು ಮನೆಯ ಬಳಿ ಇದ್ದ ತಿಪ್ಪೆಯ ಮೇಲೆ ಹಾಕಿದ್ದ ಬಾಟಲಿಯನ್ನು ಮೂಸಿ ಅಸ್ವಸ್ಥಗೊಂಡಿರುತ್ತಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಯಾವುದೇ ರೀತಿಯ ಪ್ರಾಣಾಪಾಯವಿಲ್ಲವೆಂದು ತಿಳಿಸಿರುತ್ತಾರೆ. ಆದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಮುಂದಿನ ದಿನಗಳಲ್ಲಿ ಉಂಟಾಗಬಾರದು ಎಂಬ ದೃಷ್ಠಿಯಿಂದ ವೈದ್ಯರು ಜಾಗೃತೆ ವಹಿಸಿರುತ್ತಾರೆಂದರು.
ತಳಕು ಪೊಲೀಸರು ಮಕ್ಕಳ ಆರೋಗ್ಯ ಕುರಿತು ವೈದ್ಯರೊಂದಿಗೆ ಮಾಹಿತಿ ಪಡೆದಿದ್ದು, ಕ್ರಿಮಿನಾಶಕದ ಬಾಟಲಿಯನ್ನು ಪರಿಶೀಲನೆಗೆ ಕಳುಹಿಸಿಕೊಡುವುದಾಗಿ ತಿಳಿಸಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ