ಜಗಳೂರು
ಜಗಳೂರು ತಾಲೂಕನ್ನು ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಜ. 19 ರಂದು ಇಂದು ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ,ವಿರೋಧ ಪಕ್ಷದ ನಾಯಕರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಜಗಳೂರು ತಾಲೂಕು ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಸುವ ಹಿತ ರಕ್ಷಣ ಸಮಿತಿ ಅಧ್ಯಕ್ಷರೂ ಆದ ಮಾಜಿ ಎಪಿಎಂಸಿ ಅಧ್ಯಕ್ಷ ಎಲ್.ಬಿ.ಭೈರೇಶ್ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಶುಕ್ರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೆಲ ಬೆರಳೆಣಿಕೆ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರ್ಪಗೊಳಿಸಲು ಹೊರಟಿದ್ದಾರೆ, ಈ ಹೋರಾಟದಲ್ಲಿ ಅರ್ಥವಿಲ್ಲ, ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸುವ ಹೋರಾಟವನ್ನು ಬಿಟ್ಟು, ಜಗಳೂರು ಅಭಿವೃದ್ದಿಗೆ ಬೇಕಾದಂತಹ ಯೋಜನೆಗಳ ಜಾರಿ ಹೋರಾಟ ಮಾಡಲಿ, ಅದಕ್ಕೆ ನಾವು ಕೂಡು ಕೈ ಜೋಡಿಸುತ್ತೇವೆ, ಅದನ್ನು ಬಿಟ್ಟು ಜಗಳೂರು ತಾಲೂಕನ್ನು ಒಡೆಯುವ ಕೆಲಸ ಮಾಡಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು.
ಕಳೆದ ಮೂರು ತಿಂಗಳಿಂದ ಈ ಚಿತ್ರದುರ್ಗ ಜಿಲ್ಲೆ ಸೇರ್ಪಡೆ ಹೋರಾಟ ಸಮಿತಿಯುವ ಪ್ರಾರಂಭವಾಗಿದ್ದು, ಸಮಿತಿಯಲ್ಲಿರುವ ಯಾದವರೆಡ್ಡಿ ಯಾರು ಎಂಬುದೇ ಗೊತ್ತಿಲ್ಲ. ನಮ್ಮ ತಾಲೂಕಿನಲ್ಲಿ ನಾನು ಎಂದೂ ಅವರನ್ನು ನೋಡಿಲ್ಲ. ವಿವಿಧ ಮಠಾಧೀಶರನ್ನು ಬೇಟಿ ಮಾಡುವ ಮೂಲಕ ಮನವಿಯನ್ನು ನೀಡುವ ಮೂಲಕ ಬೆರಳಿಕೆಯಷ್ಟು ಜನ ದಾರಿ ತಪ್ಪಿಸುತ್ತಿದ್ದಾರೆ. ನಾವೂ ಸಹ ಮುಂದಿನ ದಿನಗಳಲ್ಲಿ ಎಲ್ಲಾ ಮಠಾಧೀಶರು ಹಾಗೂ ಮುಖ್ಯಮಂತ್ರಿಗಳಿಗೂ, ಸಚಿವರಿಗೂ ದಾವಣಗೆರೆ ಜಿಲ್ಲೆಯಲ್ಲಿಯೇ ಜಗಳೂರು ತಾಲೂಕು ಉಳಿಯಲಿ ಎಂದು ಮನವಿ ನೀಡಲಾಗುವುದು. ಜ. 19 ರಂದು ಇಂದು ನಡೆಯುವ ಪ್ರತಿಭಟನೆಯಲ್ಲಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಮಿತಿಯ ಮಾರ್ಗದರ್ಶಕ ಸುಭಾಷ್ಚಂದ್ರಬೋಸ್ ಮಾತನಾಡಿ ಚಿತ್ರದುರ್ಗ ಜಿಲ್ಲೆ ಸೇರ್ಪಡೆ ಸಮಿತಿಯವರು ಜಗಳೂರು ತಾಲೂಕನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಯಾದರೆ ನಮಗೆ ಏನು ಲಾಭವಿಲ್ಲ, ತಾಲೂಕು ಅಭಿವೃದ್ದಿಗೆ ಹೋರಾಟ ಮಾಡಿದರೆ ನಾವೂ ಅವರ ಜೊತೆ ಕೈ ಜೋಡಿಸುತ್ತೇವೆ. ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಜಗಳೂರು ತಾಲೂಕು ಏನು ಅಭಿವೃದ್ದಿ ಕಂಡಿಲ್ಲ, ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾದಾಗಿನಿಂದಲೂ ಜಗಳೂರು ತಾಲೂಕು ಸಾಕಷ್ಟು ಅಭಿವೃದ್ದಿಯಾಗಿದೆ. ನಮ್ಮ ಜಗಳೂರಿನಲ್ಲಿರುವ ಮೂಲಭೂತ ಸೌಲಭ್ಯಗಳು ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲೂ ಇಲ್ಲ ಎಂದು ಆರೋಪಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯು.ಜಿ.ಶಿವಕುಮಾರ್ ಮಾತನಾಡಿ ಚಿತ್ರದುರ್ಗ ಜಿಲ್ಲೆ ಸೇರ್ಪಡೆಯಿಂದ ತಾಲೂಕಿಗೆ ಏನು ಪ್ರಯೋಜನವಿಲ್ಲ, 371 ಜೆ ಸೌಲಭ್ಯ ಸಿಗುತ್ತದೆ ಎಂದರೆ ಎಲ್ಲರೂ ಹೋರಾಟ ಮಾಡೋಣ ಎಂದರು.ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ನಾಗರಾಜ್ ಮಾತನಾಡಿ ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಜಗಳೂರು ತಾಲೂಕು ಏನೂ ಅಭಿವೃದ್ದಿ ಕಾಣಲಿಲ್ಲ, ದಾವಣಗೆರೆ ಜಿಲ್ಲೆಗೆ ಸೇರಿದಾಗಿನಿಂದ ಉನ್ನತ ಅಭಿವೃದ್ದಿಯಾಗಿದೆ. ನಮ್ಮ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆಯಲ್ಲಿಯೇ ಮುಂದುವರೆಯಲಿ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯ ಆರ್. ತಿಪ್ಪೇಸ್ವಾಮಿ ಮಾತನಾಡಿ ನಮ್ಮ ಜಗಳೂರು ಪಟ್ಟಣದಲ್ಲಿರುವ ಸುಸಜ್ಜಿತ ಆಸ್ಪತ್ರೆ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲೂ ಇಲ್ಲ, ಪಟ್ಟಣದ ಆಸ್ಪತ್ರೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಸೇರಿದಂತೆ ಕೂಡ್ಲಿಗಿ ತಾಲೂಕಿನಿಂದಲೂ ರೋಗಿಗಳು ಚಿಕಿತ್ಸೆಗೆಂದು ನಮ್ಮ ಪಟ್ಟಣವನ್ನು ಅವಲಂಭಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಮಾಡುವ ಹೋರಾಟ ಸಮಿತಿಯವರು ಇಷ್ಟು ವರ್ಷ ಎಲ್ಲಿ ಮಲಗಿದ್ದರು, ಈಗೇಕೆ ಹೋರಾಟ ಮಾಡುತ್ತಿದ್ದಾರೆ, ಅವರ ಹೋರಾಟದಲ್ಲಿ ಸ್ವಾರ್ಥವಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವೈ.ಎನ್.ಮಂಜುನಾಥ್, ಕಾರ್ಯಾಧ್ಯಕ್ಷ ಬಸವಾಪುರ ರವಿಚಂದ್ರ, ಸಂಚಾಲಕ ಅಣಬೂರು ಮಠದ ಕೊಟ್ರೇಶ್, ಸಂಘಟನೆ ಕಾರ್ಯದರ್ಶಿ ಗೋಡೆ ಪ್ರಕಾಶ್, ಖಜಾಂಚಿ ಹೆಚ್.ಸಿ.ಮಹೇಶ್, ಕಾರ್ಯದರ್ಶಿ ಶಿವನಗೌಡ, ಉಪಾಧ್ಯಕ್ಷರಾದ ಮೆದಗಿನಕೆರೆ ಈರಣ,್ಣ ಬಿ.ಎಸ್.ನಾಗನಗೌಡ್ರು, ರುದ್ರಪ್ಪ, ಮೊಳಮ್ಮನಹಳ್ಳಿ ವೆಂಕಟೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








