ಡಾ.ಗೋವಿಂದರವರ ಕೃತಿಗಳ ಲೋಕಾರ್ಪಣೆ

 ಚಿತ್ರದುರ್ಗ:

     ದಲಿತ ಲೇಖಕರಿಗಿರುವ ಪ್ರಜ್ಞೆ, ಆಳ, ಗುರುತ್ವ ಮೇಲ್ವರ್ಗದ ಲೇಖಕರಿಗಿಲ್ಲ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಕವಿ ಪ್ರೊ.ಚಂದ್ರಶೇಖರತಾಳ್ಯ ಹೇಳಿದರು.

        ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕತಿಕ ಪರಿಷತ್‍ನ ಹದಿನೈದನೆ ವರ್ಷದ ಜಾನಪದ ಸಾಂಸ್ಕತಿಕ ಉತ್ಸವದ ಅಂಗವಾಗಿ ಡಾ.ಗೋವಿಂದ ಇವರು ರಚಿಸಿರುವ ನಾಲ್ಕು ಕೃತಿಗಳನ್ನು ಭಾನುವಾರ ತ.ರಾ.ಸು. ರಂಗಮಂದಿರದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

          ದಲಿತರ ಸಂವೇದನೆ ದಲಿತ ಲೇಖಕರನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಬೇಕಾದವರು ವಿದ್ಯಾರ್ಥಿಗಳು ಮತ್ತು ಯುವ ಸಮೂಹ. ದಲಿತರ ಸಂವೇದನೆ ಅತ್ಯಂತ ವಿಶಿಷ್ಟವಾದುದು. ಅಸ್ಪಶ್ಯ ಎಂದು ಈಗಲೂ ಕರೆಸಿಕೊಳ್ಳುತ್ತಿರುವ ದಲಿತರು ನೋವು ಸಂಕಟ ಯಾತನೆ ಅನುಭವಿಸುತ್ತಿದ್ದಾರೆ. ಜಾತಿ ವಿನಾಶವಾಗುತ್ತದೆ ಎಂಬುದು ಬಹುದೊಡ್ಡ ಕನಸು. ಕೋಲಾರ ಜಿಲ್ಲೆಯ ಚನ್ನಕ್ಕಲ್ ಗ್ರಾಮದಲ್ಲಿ ಇಂದಿಗೂ ದಲಿತರಿಗೆ ಕ್ಷೌರ ಮಾಡುವುದಿಲ್ಲ. ಹೋಟೆಲ್‍ಗಳಲ್ಲಿ ನೀರು ಕಾಫಿ ಕೊಡುತ್ತಿಲ್ಲ. ಮಾನವೀಯತೆಯಿರುವ ಯಾವ ವ್ಯಕ್ತಿಯೂ ದಲಿತರನ್ನು ಈ ರೀತಿ ನಡೆಸಿಕೊಳ್ಳಬಾರದು. ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ, ಗಾಂಧಿ ಇವರುಗಳು ದಲಿತರನ್ನು ಮೇಲಕ್ಕೆತ್ತುವ ಬಹುದೊಡ್ಡ ಆಸೆ ಇಟ್ಟುಕೊಂಡಿದ್ದರು. ಆದರೆ ಅಸ್ಪಶ್ಯತೆ ಇನ್ನು ಜೀವಂತವಾಗಿದೆ. ಸರ್ವಣೀಯರು ಬದಲಾಗುವುದಿಲ್ಲ ಎನ್ನುವ ಸಿಟ್ಟು ಅಂಬೇಡ್ಕರ್‍ರವರಲ್ಲಿ ಬಹಳಷ್ಟಿತ್ತು ಎಂದು ತಿಳಿಸಿದರು.

           ಹಳ್ಳಿಗಳಲ್ಲಿ ಜಾತಿಯತೆ ಬಲವಾಗಿದೆ ಎಂದುಕೊಳ್ಳುವುದು ತಪ್ಪು. ನಗರ ಪ್ರದೇಶಗಳಲ್ಲಿಯೂ ಜಾತಿಯತೆ ಅತಿ ಸೂಕ್ಷ್ಮವಾಗಿ ನಿಂತಿದೆ. ದಲಿತರು ಹುಟ್ಟಿನಿಂದ ಕಲಾವಿದರು, ಹಾಗಾಗಿ ಅವರಲ್ಲಿ ಸೃಜನಶೀಲತೆಯಿದೆ. ದಲಿತರ ಸಂವೇದನೆಯನ್ನು ವೈಭವೀಕರಿಸಬೇಕಿಲ್ಲ. ಸೂಕ್ಷ್ಮವಾಗಿ ಗಮನಿಸಬೇಕು. ಮೀಸಲಾತಿ ಸರಿಯಾಗಿ ಬಳಕೆಯಾಗುತ್ತಿಲ್ಲ. ದಲಿತರಲ್ಲಿ ಕೆಲವೇ ಕೆಲವರು ಅನುಭವಿಸುವಂತಾಗಿದೆ.

          ಮೇಲ್ವರ್ಗದ ದಲಿತರು ಹಳ್ಳಿಗಳಿಗೆ ಹೋಗಿ ಅನಕ್ಷರತೆ ಹೋಗಲಾಡಿಸಿ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು. ದಲಿತ ಲೇಖಕನ ಬರವಣಿಗೆ ಅಧಿಕೃತ ದಾಖಲೆಯಾಗಿರುತ್ತೆ. ಭಾಷೆ, ಸಂವೇದನೆಯಿಂದ ದಲಿತ ಸಮೂಹ ಸ್ಥಗಿತವಾಗಿದೆ. ಅದಕ್ಕಾಗಿ ದಲಿತ ಲೇಖಕನ ಚಿಂತನೆ ಚಲನಶೀಲತೆಯಾಗಬೇಕು. ಯಾವುದು ಸ್ಥಿರವಲ್ಲ ಎಂದು ಬುದ್ದ ಹೇಳಿದ್ದ. ಅದಕ್ಕಾಗಿ ಹಿಂದು ಧರ್ಮ ತೊರೆದ ಅಂಬೇಡ್ಕರ್ ಭೌದ್ದ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದರು.

           ಪ್ರೊ.ಹೆಚ್.ಲಿಂಗಪ್ಪ ಇವರ ಬದುಕು ಬರಹ ಕುರಿತು ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ ಪ್ರೊ.ಲಿಂಗಪ್ಪನವರ ಕಾವ್ಯದಲ್ಲಿ ನೋವು ನಲಿವು, ಸೃಜನಶೀಲತೆಯ ಧ್ವನಿಯಿದೆ. ಜಗಳೂರು ತಾಲೂಕು ತೋರಣಘಟ್ಟೆಯ ಬಡ ದಲಿತ ಕುಟುಂಬದಲ್ಲಿ ಜನಿಸಿದ ಪ್ರೊ.ಹೆಚ್.ಲಿಂಗಪ್ಪನವರು 1980 ರಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿ ಮೈಸೂರು, ಕುವೆಂಪು, ಧಾರವಾಡ ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮತ್ತೊಬ್ಬರ ದುಃಖವನ್ನು ತಮ್ಮದಾಗಿಸಿಕೊಳ್ಳುವ ದಾರಾಳತನ ಅವರಲ್ಲಿದೆ ಎಂದು ಗುಣಗಾನ ಮಾಡಿದರು.

          ಪ್ರೊ.ಹೆಚ್.ಲಿಂಗಪ್ಪನವರ ಕೃತಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್‍ರವರ ಚಿಂತನೆಯಿದೆ.ಬಾಂಬ್‍ಗಳನ್ನು ಕಂಡು ಹಿಡಿದು ಯುದ್ದ ಮಾಡಿದರೆ ಜಗತ್ತು ನಾಶವಾಗುತ್ತದೆ. ಬುದ್ದನ ತತ್ವ ಸಿದ್ದಾಂತಗಳಿಂದ ಶಾಂತಿಯಿಂದ ಜೀವಿಸಬಹುದು. ದಲಿತ ವರ್ಗದ ಮಹಿಳೆಯ ಸಂಕಷ್ಟಗಳನ್ನು ಕೃತಿಯಲ್ಲಿ ಬರೆದಿದ್ದಾರೆ. ಎಲೆಮರೆಯ ಕಾಯಿಯಂತೆ ಶಿಲೆಮರೆಯ ದೇವರಂತೆ ದಲಿತ ವಚನಕಾರರಿದ್ದರು ಎನ್ನುವುದನ್ನು ಪ್ರೊ.ಹೆಚ್.ಲಿಂಗಪ್ಪ ತಮ್ಮ ಕೃತಿಯಲ್ಲಿ ಪರಿಚಯಿಸಿದ್ದಾರೆ. ಸರ್ವೊದಯ, ಸಮಾನತೆಯನ್ನು ಕೃತಿಯಲ್ಲಿ ಹೇಳುತ್ತಾ ಹೋಗಿದ್ದಾರೆ. ಅಂಬಿಗರ ಚೌಡಯ್ಯ ಬೇರೆ ಎಲ್ಲಾ ವಚನಕಾರರಿಗಿಂತ ಭಿನ್ನವಾಗಿದ್ದರು ಎನ್ನುವುದನ್ನು ಕೃತಿಯಲ್ಲಿ ವಿವರಿಸಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳನ್ನು ಬರೆದಿದ್ದಾರೆ ಎಂದು ಕೃತಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

           ಬುದ್ದ ಬಸವ ಇಬ್ಬರು ಅರಮನೆಯಲ್ಲಿ ರಾಜರಂತೆ ಇರಬಹುದಿತ್ತು. ಆದರೆ ಹಸಿವಿನ ನೋವು ಕಂಡ ಅವರು ವೈಭೋಗದ ಜೀವನ ತೊರೆದರು ಎನ್ನುವುದನ್ನು ಕೃತಿಯಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ ಎಂದು ಹೇಳಿದರು.

           ಪ್ರೊ.ಎ.ಕೆ.ಹಂಪಣ್ಣನವರ ಕಾವ್ಯಾವಲೋಕನ ಕುರಿತು ಮಾತನಾಡಿದ ವಿಮರ್ಶಕ ಮೈಸೂರಿನ ಡಾ.ಬಿ.ವಿ.ವಸಂತಕುಮಾರ್ ದುಃಖ ದುಮ್ಮಾನ ಇಡೀ ದಲಿತ ಸಮುದಾಯದ ಜೀವನ ದ್ರೌವ್ಯ ಎನ್ನುವುದನ್ನು ಪ್ರೊ.ಎ.ಕೆ.ಹಂಪಣ್ಣ ತಮ್ಮ ಕೃತಿಯಲ್ಲಿ ಹೇಳಿದ್ದಾರೆ. ಕಾವ್ಯದ ಮಹತ್ವ ಓದುಗನ ಕರುಣೆಯನ್ನು ಎಂದಿಗೂ ನಿರೀಕ್ಷಿಸುವುದಿಲ್ಲ. ಲೆಕ್ಕಕ್ಕಿಟ್ಟುಕೊಳ್ಳುವುದೂ ಇಲ್ಲ. ಅಳದೆ ಅತ್ತು, ನಗದೆ ನಗಾಡಿ, ಒಳಗಡೆ ಬೆಂಕಿ, ನೋವು, ಸಂಕಟ, ಆಕ್ರೋಶ ಹೇಗೆ ಕುದಿಯುತ್ತದೆ ಎಂಬುದನ್ನು ಕೃತಿಯಲ್ಲಿ ಚಿತ್ರಿಸಿರುವುದು ಹಂಪಣ್ಣನವರಿಗೆ ದಲಿತರ ಮೇಲಿರುವ ಅಭಿಮಾನವನ್ನು ತೋರುತ್ತದೆ ಎಂದರು.

          ಸಂಕಟವನ್ನು ಅನುಭವಿಸಿ ಪ್ರೇಮವನ್ನಾಗಿಸುವ ಕಾವ್ಯ ಪ್ರೊ.ಎ.ಕೆ.ಹಂಪಣ್ಣನವರದು. ಕಾವ್ಯದಲ್ಲಿ ಸಿಟ್ಟಿದೆ. ದಲಿತ ಕವಿಯೊಳಗಿರುವ ಸಿಟ್ಟು ಕ್ರೋದದಿಂದ ಬಂದಿದ್ದಲ್ಲ. ನೋವಿನಿಂದ ಹುಟ್ಟಿಕೊಂಡಿದ್ದು, ಇಂತಹ ಸಂಕಲನಗಳ ಕುರಿತು ಯಾವ ಅಕಾಡೆಮಿಗಳು ಗಂಭೀರವಾಗಿ ಚಿಂತಿಸಿಲ್ಲ ಏಕೆ ಎಂದು ದಲಿತ ಲೇಖಕರುಗಳು ಪ್ರಶ್ನಿಸಬೇಕಿದೆ ಎಂದರು.

             ಎಸ್.ಆರ್.ಗುರುನಾಥ್ ಇವರ ಬದುಕು ಬರಹ ಕುರಿತು ಇತಿಹಾಸ ಉಪನ್ಯಾಸಕ ಡಾ.ಎನ್.ಎಸ್.ಮಹಂತೇಶ್ ಮಾತನಾಡುತ್ತ ಬಂಡಾಯ, ಪ್ರತಿಭಟನೆ ಜೀವನದಲ್ಲಿ ಕಮ್ಮಿ. ಆದರೆ ಕೃತಿಯಲ್ಲಿ ಎಸ್.ಆರ್.ಗುರುನಾಥ್‍ರವರ ಬಂಡಾಯ ಮನೋಭಾವ ಜಾಸ್ತಿಯಿದೆ. ದಲಿತ ಕುಟುಂಬದಲ್ಲಿ ಹುಟ್ಟಿ ದಲಿತ ಪರಿಸರದಲ್ಲಿ ಬೆಳೆದ ಅವರಿಗೆ ದಲಿತರ ನೋವು ಸಂಕಟ, ಹಿಂಸೆ, ಅವಮಾನಗಳ ಬಗ್ಗೆ ಗೊತ್ತಿದೆ. ಜಾತಿಯತೆ, ಮೇಲ್ವರ್ಗದ ಶೋಷಣೆ, ಜಾತಿ ಸೂತಕ ಅಂಶಗಳು ಎಸ್.ಆರ್.ಗುರುನಾಥ್ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲು ಮೂಲ ಪ್ರೇರಣೆ ಎಂದು ಹೇಳಿದರು.

             ಕವನ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ಸಾಹಿತ್ಯವನ್ನು ಓದುವ ಹವ್ಯಾಸ ಎಸ್.ಆರ್.ಗುರುನಾಥ್‍ರವರು ಚಿಕ್ಕಂದಿನಿಂದಲೆ ರೂಢಿಸಿಕೊಂಡಿದ್ದರು. ಜಾತಿಗಳನ್ನು ಮೀರಿದ ಬುದ್ದ, ಬಸವ, ಅಂಬೇಡ್ಕರ್ ಇಲ್ಲದಿದ್ದರೆ ಜಗತ್ತಿನ ಸ್ಥಿತಿ ಏನಾಗುತ್ತಿತ್ತೊ ಗೊತ್ತಿಲ್ಲ ಎನ್ನುವ ಕಲ್ಪನೆ ಅವರ ಕೃತಿಯಲ್ಲಿ ಅಡಕವಾಗಿದೆ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಲ್ಲ. ಯುಗ ಪುರುಷ. ಅಂಬೇಡ್ಕರ್‍ರವರ ವಿಚಾರ ಧಾರೆಯನ್ನಿಟ್ಟುಕೊಂಡು ಎಸ್.ಆರ್.ಗುರುನಾಥ್ ಸಾಹಿತ್ಯ ರಚಿಸಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿದೆ ಎಂದು ಹೆಮ್ಮೆಯಿಂದ ನುಡಿದರು.

           ಡಾ.ಯಲ್ಲಪ್ಪ ಕೆ.ಕೆ.ಪುರ ಇವರ ಬದುಕು ಬರಹ ಕುರಿತು ಮಾತನಾಡಿದ ರಂಗನಾಥ ಆರನಕಟ್ಟೆ 2009 ರಲ್ಲಿ ಡಾ.ಯಲ್ಲಪ್ಪ ಕೆ.ಕೆ.ಪುರ ಇವರ ಹೊರಗಿನವರು ಕಾದಂಬರಿ ಪ್ರಕಟವಾಯಿತು. ಸಾಂಸ್ಕತಿಕ ನೆನಪುಗಳನ್ನು ಹೇಗೆ ಎದೆಯಲ್ಲಿಟ್ಟುಕೊಳ್ಳಬೇಕೆಂಬುದು ಈ ಕಾದಂಬರಿಯ ಚರ್ಚೆಯಲ್ಲಿದೆ. ದಲಿತರು ಸಾಂಸ್ಕತಿಕವಾಗಿ ಎಷ್ಟು ಶ್ರೀಮಂತರು ಎನ್ನುವುದನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap