ಹೊಳಲ್ಕೆರೆ
2019-20ನೇ ಸಾಲಿನ ಆಯವ್ಯಯ ಮಂಡನೆಯನ್ನು ಪ.ಪಂ.ಅಧ್ಯಕ್ಷೆ ಸವಿತಾ ಬಸವರಾಜ್ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು.
2019ನೇ ಸಾಲಿಗೆ ಪ್ರಾರಂಭಿಕ ಶುಲ್ಕ 1147.50 ಲಕ್ಷ ರೂಗಳು, ನಿರೀಕ್ಷಿತ ಒಟ್ಟು ಆದಾಯ 2126.86 ಲಕ್ಷ ರೂಗಳಲ್ಲಿ ಖರ್ಚು 2092.00 ಲಕ್ಷ ರೂಗಳು, ಉಳಿತಾಯ 34.86 ಲಕ್ಷ ರೂಗಳು ಎಂದು ಸಭೆಯಲ್ಲಿ ಮಂಡಿಸಿದರು.ಪ.ಪಂ. ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ 2019-20ನೇ ಆಯವ್ಯಯ(ಬಜೆಟ್) ಮಂಡಿಸಿದರು.
ಈ ಸಭೆ ಅಂತಿಮ ಸಭೆಯಾಗಿದೆ ಚುನಾವಣೆ ದಿನಾಂಕ ಘೋಷಣೆ ಯಾವಾಗ ಪ್ರಕಟಗೊಳ್ಳುವುದು ಎಂಬ ಬಗ್ಗೆ ನಾವೆಲ್ಲ ಕಾತುರರಾಗಿದ್ದೇವೆ ಎಂದು ಅಧ್ಯಕ್ಷೆ ಸವಿತಾ ಬಸವರಾಜ್ ತಿಳಿಸಿದಾಗ ಕೆಲವು ಸದಸ್ಯರು ಕಳೆದ ಮೂರು ತಿಂಗಳ ಹಿಂದೆ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆಯೋ ಎಂಬ ಬಗ್ಗೆ ಸಭೆಯಲ್ಲಿ ತಿಳಿಸಬೇಕು ಎಂದು ಪ.ಪಂ.ಸದಸ್ಯ ಕೆ.ಸಿ.ರಮೇಶ್ ಮುಖ್ಯಾಧಿಕಾರಿಯನ್ನು ಮತ್ತು ಅಧ್ಯಕ್ಷರನ್ನು ಒತ್ತಾಯ ಮಾಡಿದರು.
ಸದಸ್ಯರು ಸಭೆಯಲ್ಲಿ ಕೇಳುವ ದಾಖಲೆಗಳನ್ನು ಮತ್ತು ಸಭಾ ನಡವಳಿಕೆಗಳನ್ನು ಪರಿಗಣಿಸುತ್ತಿಲ್ಲ. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಿಲ್ಲ. ಈ ಅಧಿಕಾರಿಗಳ ವರ್ತನೆ ಬಗ್ಗೆ ಸದಸ್ಯರಾದ ಕೆ.ಸಿ.ರಮೇಶ್, ಸಯ್ಯದ್‍ಸಜೀಲ್, ಅಲ್ಲಾಬಕಷ್, ಸಯ್ಯದ್‍ಖಾದರ್, ಸವಿತಾ ಬಸವರಾಜ್, ಶಾರದಮ್ಮ ರುದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಸ್ವಚ್ಚತೆಯನ್ನು ಕಾಣುತ್ತಿಲ್ಲ. ಚರಂಡಿಗಳಲ್ಲಿ ಕೊಳಚೆ ನೀರನ್ನು ಸಮರ್ಪಕವಾಗಿ ಒಳಗೆ ಕಳುಹಿಸುತ್ತಿಲ್ಲ, ಕೆಲವು ರಸ್ತೆಗಳಲ್ಲಿ ತಿಂಗಳ ಗಟ್ಟಲೆ ಕಸದ ರಾಶಿ ಅಲ್ಲಲ್ಲಿ ಬಿದ್ದು ತಿಪ್ಪೆ ಗುಂಡಿಗಳಾಗಿವೆ. ಆರೋಗ್ಯಾಧಿಕಾರಿ ತಮ್ಮ ಕರ್ತವ್ಯವವನ್ನು ನಿರ್ವಹಿಸದೇ ಕರ್ತವ್ಯ ಲೋಪಯೆಸಗುತ್ತಿದ್ದಾರೆ. ಇಂತಹವರ ಸೇವೆ ಅಗತ್ಯವಿಲ್ಲ. ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಸಯ್ಯದ್‍ಸಜೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸುವುದಾಗಿ ಮುಖ್ಯಾಧಿಕಾರಿ ಡಿ.ಉಮೇಶ್ ಉತ್ತರಿಸಿದರು.
ವಾರ್ಡ ನಂ.11ರಲ್ಲಿ ರಸ್ತೆ ನಿರ್ಮಾಣ ಚರಂಡಿ ಮುಂತಾದ ಅಭಿವೃಧ್ದಿ ಕಾಮಗಾರಿಗಳಿಗೆ ಸರ್ಕಾರ 30 ಲಕ್ಷ ರೂಗಳನ್ನು ಬಿಡುಗಡೆ ಮಾಡಿ 2 ವರ್ಷಗಳು ಕಳೆದರು ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೆ ವಿನಾಕಾರಣ ಸಂಬಂಧ ಪಟ್ಟ ಇಂಜಿನಿಯರ್‍ಗಳು ಮೂಂದೂಡುತ್ತಿದ್ದಾರೆ ಎಂದು ಸಯ್ಯದ್‍ಖಾದರ್ ಆರೋಪಿಸಿದರು.
ಇಡೀ ಪಟ್ಟಣ ಕತ್ತಲ ರಾತ್ರಿಯಾಗಿದೆ. ಪಟ್ಟಣ ಪಂಚಾಯಿತಿಯ ಮೂಲಭೂತ ವ್ಯವಸ್ಥೆಗಳಾದ ಬೀದಿ ದೀಪ ಕುಡಿಯುವ ನೀರು ಸ್ವಚ್ಚತೆ ಇವುಗಳ ಬಗ್ಗೆ ಅಧಿಕಾರಿಗಳಲ್ಲಿ ಯಾವುದೇ ಕಾಳಜಿ ಇಲ್ಲ. ಈ ಸಭೆಯನ್ನು ಯಾವ ಪುರುಷಾರ್ಥಕ್ಕೆ ಮಾಡಬೇಕು. ಸಭೆಯಲ್ಲಿ ಪ್ರಸ್ತಾಪಿಸಿದ ವಿಚಾರಗಳು ಕೇವಲ ಕಡಿತಗಳಲ್ಲಿ ಮಾತ್ರ ಉಳಿತ್ತಿದೆ ವಿನಹ ಯಾವುದೇ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಸದಸ್ಯ ಹಬೀಬುರ್ ರಹಮಾನ್ ಅಸಂತೋಷ ವ್ಯಕ್ತಪಡಿಸಿದರು.
ಸಭೆಯ ಅನುಮತಿ ಪಡೆಯದೇ ಲಕ್ಷಾಂತರ ರೂಪಾಯಿಗಳನ್ನು ವ್ಯಚ್ಚಮಾಡಲು ನಿಮಗೆ ಯಾರು ಅಧಿಕಾರ ನೀಡಿದ್ದಾರೆ. ಸದಸ್ಯರ ಪೂರ್ವಾನುಮತಿ ಪಡೆಯದೇ ಹಣವನ್ನು ದುಂದುವೆಚ್ಚ ಮಾಡುವುದು ಮಹಾ ಅಪರಾಧ ಅಧ್ಯಕ್ಷರ ಗಮನಕ್ಕೂ ತಾರದೆ ಆ ಹಣವನ್ನು ವ್ಯಚ್ಚ ಮಾಡುತ್ತಿರುವ ಬಗ್ಗೆ ಕೇಳಿ ತಮಗೆ ಆಶ್ಚೇರ್ಯವಾಗಿದೆ. ಇದಕ್ಕೆ ಮುಖ್ಯಾಧಿಕಾರಿ ಉತ್ತರ ನೀಡಬೇಕು ಎಂದು ಕೆ.ಸಿ.ರಮೇಶ್ ಪ್ರಶ್ನೆ ಮಾಡಿದರು.ಈ ಬಗ್ಗೆ ಪ.ಪಂ. ಮುಖ್ಯಾಧಿಕಾರಿ ಡಿ.ಉಮೇಶ್ ಉತ್ತರ ನೀಡಲು ತಡಕಾಡಿದರು.
ಸಭೆಗೆ ಮುಂಚೆ ಕೆಲವು ಪಟ್ಟಣದ ನಾಗರೀಕರು ಕುಡಿಯುವ ನೀರು ತಮ್ಮ ವಾರ್ಡಗಳಿಗೆ ಪೂರೈಕೆಯಾಗದೆ ತಿಂಗಳಾದರು ಇಲ್ಲಿಯವರೆಗೆ ನೀರಿಲ್ಲ. ಕುಡಿಯುವ ನೀರಿಗಾಗಿ ಸರ್ಕಾರ ಸಾಕಷ್ಟು ಹಣವನ್ನು ನೀಡಿದರು ಪಟ್ಟಣ ಪಂಚಾಯಿತಿಯ ಸಿಬ್ಬಂದಿಯ ಉದಾಸೀನ ಮತ್ತು ದೌರ್ಬಲ್ಯಗಳಿಂದ ನಾಗರೀಕರು ಪಾಶ್ಚಾತ್ತಾಪ ಪಡುವಂತಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಕ ಜಯಪ್ಪ ಸಭೆಯ ಪ್ರಾರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದಾಗ ಅದಕ್ಕೆ ಅಧಿಕಾರಿಗಳು ಉತ್ತರ ನೀಡದೇ ತಬ್ಬಿಬ್ಬಾದರು.
ಪಟ್ಟಣದ ಬಸ್ ನಿಲ್ದಾಣದ ಪಕ್ಕ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಿ ಇಲ್ಲಿಗೆ 3 ವರ್ಷಗಳು ಕಳೆದರು ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದ ನಾಲ್ಕು ಜನರು ಠೇವಣಿಯನ್ನು ಪ.ಪಂಗೆ ಇಲ್ಲಿಯವರೆಗೆ ಪಾವತಿ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳು ಹಲವಾರು ನೋಟೀಸ್ ಗಳನ್ನು ನೀಡಿದರು ಅವರು ಠೇವಣಿ ಹಣವನ್ನು ಪ.ಪಂ. ಗೆ ಪಾವತಿ ಮಾಡಿಲ್ಲ ಎಂದು ಸಭೆಯ ಮುಂದೆ ಕಂದಾಯ ಅಧಿಕಾರಿ ತಿಳಿಸಿದರು.
ಯಾರು ಹಣವನ್ನು ಕಟ್ಟಿಲ್ಲ ಕೆಲವರು ಸ್ವಲ್ಪ ಹಣವನ್ನು ಮಾತ್ರ ಪಾವತಿ ಮಾಡಿದ್ದಾರೆ ಉಳಿದ ಬಾಕಿ ಹಣವನ್ನು ಪಾವತಿಸುವಲ್ಲಿ ಉದಾಸೀನ ಮಾಡುತ್ತಿದ್ದಾರೆ ಅಂತಹವರ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಮಾಡಬೇಕೆಂದು ಸದಸ್ಯ ಕೆ.ಸಿ.ರಮೇಶ್, ಸಜೀಲ್, ಸಯಿದ್, ರಾಜಪ್ಪ, ಖಾದರ್ ಮುಂತಾದವರು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ