ಬಳ್ಳಾರಿ
ಬಳ್ಳಾರಿ ನಗರಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಒಳ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೆ, ಚರಂಡಿಯ ನೀರು ಹೊರಗಡೆ ಬಂದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿ ವಹಿಸಿ ಅದನ್ನು ತುರ್ತು ಪರಿಹರಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತ ಮೊಹಮ್ಮದ್ ಮುನ್ನೀರ್ ಅವರು ಸೂಚಿಸಿದರು.
ನಗರದ ಮಹಾನಗರಪಾಲಿಕೆಯ ಶ್ರೀ ಕೃಷ್ಣದೇವಾರಾಯ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ರೂಸ್‍ಪೇಟೆಯ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರವಾನಿಗೆ ಇಲ್ಲದೇ ಭೂ ಖಾತಾ ಬದಲಾವಣೆ ನಡೆಯುತ್ತಿದೆ. ಇದನ್ನು ಕಂಪ್ಯೂಟರೀಕರಣ ಮಾಡಬೇಕು ಎಂದು ಪಾಲಿಕೆ ಸದಸ್ಯರು ಹೇಳಿದರು. ವಿಜಯನಗರದಲ್ಲಿ ಮೊಬೈಲ್ ಟವರ್ ಸ್ಥಾಪನೆಗೆ ಯಾವ ಆಧಾರದ ಮೇಲೆ ಅನುಮತಿ ನೀಡಿದ್ದೀರಿ ಎಂಬುದಾಗಿ, ಸಾರ್ವಜನಿಕ ಹಿತಾಸಕ್ತಿಯಡಿ ಸಾರ್ವಜನಿಕರ ಪರವಾಗಿ ಪ್ರಶ್ನೆಯನ್ನು ಸಭೆಯಲ್ಲಿ ಮಂಡಿಸಿದರು.
ನಗರದ ಪ್ರಸ್ತುತ ಇರುವ ಹೂ ಮತ್ತು ಹಣ್ಣಿನ ಮಾರ್ಕೆಟ್‍ಅನ್ನು ಸ್ಥಳಾಂತರಿಸಲು ನಿರ್ಧರಿಸಿದ್ದು, ಸಣ್ಣ ಮಾರುಕಟ್ಟೆಯಲ್ಲಿ 36 ಮಳಿಗೆಗಳು ಖಾಲಿ ಇವೆ. ಸ್ಥಳದ ಅಭಾವವಿರುವುದಿಂದ ದೊಡ್ಡ ಮಾರುಕಟ್ಟೆಯ ಮೊದಲ ಮಹಡಿ ಮೇಲೆ ಹೂ ಮತ್ತು ಹಣ್ಣಿನ ಮಾರುಕಟ್ಟೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ರೇಣುಕಾಚಾರಿ ನಗರ, ಅಲ್ಲಂ ಲೇಔಟ್‍ಗಳಿಗೆ ಕಸ ಸಂಗ್ರಹಣೆ ಮಾಡುವುದಕ್ಕೆ ಪಾಲಿಕೆಯ ವಾಹನಗಳು ಬರುತ್ತಿಲ್ಲ ಎಂಬುದಾಗಿ ದೂರುಗಳಿದ್ದು, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು. ಸಭೆಯಲ್ಲಿ ರಸ್ತೆಯ ದುರಸ್ತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್, ರಸ್ತೆ ದುರಸ್ಥಿ ಮಾಡಿದ ಗುತ್ತಿಗೆದಾರರ ಹಣ ಪಾವತಿ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಸುಶೀಲಬಾಯಿ, ಉಪ ಮಹಾಪೌರರಾದ ದಿವ್ಯಕುಮಾರಿ ಸೇರಿದಂತೆ ಪಾಲಿಕೆಯ ಸದಸ್ಯರುಗಳು, ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ