ಬೆಂಗಳೂರು
ಶ್ರೀರಾಮಪುರ ಮೆಟ್ರೋ ರೈಲು ನಿಲ್ದಾಣದಲ್ಲಿ ಭಾನುವಾರ ಒಂದೂವರೆ ವರ್ಷದ ಮಗು ಎಸ್ಕಲೇಟರ್ ನಿಂದ ಆಯತಪ್ಪಿ ಪಕ್ಕದ ಸಂದಿನಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಿಗ್ಗೆ ಮೃತಪಟ್ಟಿದೆ.
ನ್ಯಾಷಿನಲ್ ಕಾಲೇಜು ಬಳಿಯ ಮೆಟ್ರೋ ರೈಲು ಹಳಿ ಮೇಲೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಯತ್ನಿಸಿದ ಪ್ರಕರಣ ಮಾಸುವ ಮುನ್ನವೇ ಮಗು ಮೃತ ದಾರುಣ ಘಟನೆ ಶ್ರೀರಾಂಪುರ ಮೆಟ್ರೋ ನಿಲ್ದಾಣದ ಬಳಿ ನಡೆದಿದ್ದು ಮೆಟ್ರೋ ಪ್ರಯಾಣಿಕರು ನಾಗರೀಕರು ಬೆಚ್ಚಿಬಿದ್ದಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೆಟ್ರೋದಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ಅಜ್ಜನ ಮನೆಗೆ ಹೊರಟ ಹಾಸಿನಿ
ಶ್ರೀರಾಂಪುರದ ಲಕ್ಷ್ಮೀನಾರಾಯಣಪುರದ ರಾಮಚಂದ್ರ ಹಾಗೂ ವಾಣಿ ದಂಪತಿಯ ಒಂದೂವರೆ ವರ್ಷದ ಹಾಸಿನಿ ಮೃತ ಮಗುವಾಗಿದೆ.ಉತ್ತರಹಳ್ಳಿಯ ತವರು ಮನೆಗೆ ಮಗಳು ವಾಣಿಯನ್ನು ಕರೆದುಕೊಂಡು ಹೋಗಲು ನಿನ್ನೆ ತಂದೆ-ತಾಯಿ ಬಂದಿದ್ದರು.
ತಾಯಿ ವಾಣಿ ಅಜ್ಜ-ಅಜ್ಜಿಯ ಜೊತೆ ಹಾಸಿನಿ ಉತ್ತರಹಳ್ಳಿಗೆ ಹೋಗಲು ರಾತ್ರಿ 8.15ರ ವೇಳೆ ವೇಳೆ ಶ್ರೀರಾಮಪುರ ಮೆಟ್ರೋ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು ರೈಲು ಹತ್ತುವ ಸ್ಥಳಕ್ಕೆ ಹೋಗಲು ಎಸ್ಕಲೇಟರ್ ಮೇಲೆ ತಾಯಿ ಜೊತೆ ಹೋಗುತ್ತಿದ್ದ ಹಾಸಿನಿಯನ್ನು ಅಜ್ಜ ಬಾಲಕೃಷ್ಣ ಬಗಲಲ್ಲಿ ಎತ್ತಿಕೊಂಡಿದ್ದರು.
ಎಸ್ಕಲೇಟರ್ ನಲ್ಲಿ ಹತ್ತುವಾಗ ಬಾಲಕೃಷ್ಣ ಅವರ ಒಂದು ಕಾಲು ಸ್ಕಿಡ್ ಆಗಿ ಅವರು ಎತ್ತಿಕೊಂಡಿದ್ದ ಮಗು ಎಸ್ಕಲೇಟರ್ ಪಕ್ಕದಲ್ಲಿದ್ದ ಸಣ್ಣ ಗ್ಯಾಪ್‍ನಿಂದ ಕೆಳಗಿನ ರಸ್ತೆಗೆ ಬಿದ್ದಿದೆ ಸುಮಾರು 35 ಎತ್ತರದ ಅಡಿಯಿಂದ ಬಿದ್ದ ಹಾಸಿನಿ ಗಂಭೀರ ಗಾಯಗೊಂಡಿದ್ದಳು.
ಫಲಕಾರಿಯಾಗದ ಚಿಕಿತ್ಸೆ
ತಲೆಗೆ ಗಂಭೀರವಾಗಿ ಗಾಯಗೊಂಡು ಅಸ್ವಸ್ಥವಾಗಿದ್ದ ಹಾಸಿನಿಯನ್ನು ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 9ರ ವೇಳೆ ಮೃತಪಟ್ಟಿದೆ.
ಆಸ್ಪತ್ರೆಯ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಎಸ್ಕಲೇಟರ್ ಪಕ್ಕದಲ್ಲಿ ಜಾಗ ಬಿಟ್ಟಿದ್ದ ಬಿಎಂಆರ್‍ಸಿಎಲ್ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಮೆಟ್ರೋ ವಿರುದ್ಧ ಹಾಸಿನಿಯ ಅಜ್ಜ ಬಾಲಕೃಷ್ಣ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.
ಮೈ ಜುಮ್ಮೆನ್ನುವ ದೃಶ್ಯ
ಮೆಟ್ರೋ ಎಸ್ಕಲೇಟರ್ ಮೇಲೆ ಹೋಗುವಾಗ ನಿಯಂತ್ರಣ ತಪ್ಪಿದ್ದ ಬಗಲಲ್ಲಿದ್ದ ಮಗು ಎಗರಿ ಎಸ್ಕಲೇಟರ್‍ನಿಂದ ಪಕ್ಕದ ಸಂದಿನಿಂದ 50 ಅಡಿ ಆಳದ ರಸ್ತೆಗೆ ಬಿದ್ದಿರುವ ದೃಶ್ಯವು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ದೃಶ್ಯವು ಮೈಜುಮ್ಮೆನಿಸುವ ರೀತಿಯಲ್ಲಿದೆ.