ಹಿರಿಯೂರು :
ನಗರದ ಟಿ.ಬಿ.ಸರ್ಕಲ್‍ನಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಜಿಲ್ಲಾಆಡಳಿತ ಮತ್ತು ತಾ||ಆಡಳಿತ ವತಿಯಿಂದ ಅನಾವರಣ ಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ತಿಮ್ಮರಾಜು ಹೇಳಿದರು.
ನಗರದ ತಾಲ್ಲೂಕು ಕಛೇರಿ ಮುಂದೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ದಲಿತ ಸಂಘಟನೆಗಳ ಮುಖಂಡರುಗಳನ್ನು ಮತ್ತು ಡಾ||ಅಂಬೇಡ್ಕರ್‍ರವರ ಅನುಯಾಯಿಗಳನ್ನು ಸಭೆ ಕರೆದು ಈ ಕೂಡಲೇ ಡಾ||ಅಂಬೇಡ್ಕರ್‍ರವರ ಪ್ರತಿಮೆಯನ್ನು ಅನಾವರಣ ಮಾಡಿಕೊಡಬೇಕು ಇಲ್ಲವಾದಲ್ಲಿ ಈ ಬಗ್ಗೆ ಉಗ್ರವಾದ ಹೋರಾಟ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಅವರು ಆಗ್ರಹಿಸಿದರು.
ತಾಲ್ಲೂಕು ಪತ್ರಕರ್ತರಸಂಘದ ಅಧ್ಯಕ್ಷರಾದ ಆಲೂರು ಹನುಮಂತರಾಯಪ್ಪ ಮಾತನಾಡಿ, ಈ ಹೋರಾಟ ಇಂದು ನಿನ್ನೆಯದಲ್ಲ, ನಗರದ ಪ್ರವಾಸಿಮಂದಿರ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಅಂಬೇಡ್ಕರ್ ವೃತ್ತ ಎಂಬುದಾಗಿ ಹೆಸರಿಡಬೇಕು ಎಂಬುದು ಕಳೆದ 15 ವರ್ಷಗಳಿಂದ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ ದಲಿತ ಸಂಘರ್ಷ ಸಮಿತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂಬುದಾಗಿ ಹೇಳಿದರು.
ಈ ಪ್ರತಿಭಟನೆಯಲ್ಲಿ ಪ್ರಕಾಶ್ ಬಿರಾವರ, ಜಿಲ್ಲಾ ಸಂಚಾಲಕ ಚಂದ್ರಣ್ಣಚೋಳುಗುಡ್ಡ, ತಾ||ಅಧ್ಯಕ್ಷ ಮಹಂತೇಶ್, ಕಾರ್ಯಾಧ್ಯಕ್ಷ ರವಿಕುಮಾರ್, ಸಂಘನಾಧ್ಯಕ್ಷ ಕರುಣ್ ಕುಮಾರ್, ವೆಂಕಟೇಶ್, ತಿಪ್ಪೇಸ್ವಾಮಿ, ಅಂಬೇಡ್ಕರ್ ಸೇನೆ ಅಧ್ಯಕ್ಷ ಕೆ.ಪಿ.ಶ್ರೀನಿವಾಸ್, ಸ್ವಾಬೀಮಾನಿ ಸೇನೆ ಅಧ್ಯಕ್ಷ ರಾಮಚಂದ್ರ, ಇಂದಿರಾಗಾಂಧಿವೇದಿಕೆ ಅಧ್ಯಕ್ಷ ರಂಗಪ್ಪಯಾದವ್, ಸರ್ಪಭೊಷಣ, ಶಿವುಕುಮಾರ್, ಮೋಹನ್ ಕುಮಾರ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
