ನಿಸ್ವಾರ್ಥವಾಗಿ ದುಡಿಯುವ ನಾಯಕರ ಕೊರತೆ

ದಾವಣಗೆರೆ

       ಕುರುಬ ಸಮಾಜದಲ್ಲಿ ನಿಸ್ವಾರ್ಥವಾಗಿ ದುಡಿಯುವ ನಾಯಕರ ಕೊರತೆ ಇದೆ ಎಂದು ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀಈಶ್ವರನಂದಪುರಿ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.

       ನಗರದ ಹದಡಿ ರಸ್ತೆಯಲ್ಲಿರುವ ಕುರುಬರ ಹಾಸ್ಟೆಲ್‍ನಲ್ಲಿ ನೂತನವಾಗಿ ನಿರ್ಮಿಸಿದ್ದ ಲಿಂ.ಶ್ರೀವೇದಮೂರ್ತಿ ಚನ್ನಯ್ಯ ಒಡೆಯರ್ ಸಂಕೀರ್ಣದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

       ನಮ್ಮ ಸಮಾಜದಲ್ಲಿ ಹೊಂದಾಣಿಕೆಯ ಕೊರತೆ ಇದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕುರುಬರ ಹಾಸ್ಟೆಲ್‍ಗಳಿದ್ದು, ಅವುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕೆಲಸ ಆಗಿಲ್ಲ. ಸಮಾಜದಲ್ಲಿ ಹಲವಾರು ಜನರು ದಾನಿಗಳಿದ್ದಾರೆ. ಸೌಲಭ್ಯ ಪಡೆಯಲು ಹಲವು ಅವಕಾಶಗಳಿವೆ. ಆದರೆ, ನಿಸ್ವಾರ್ಥವಾಗಿ ದುಡಿಯುವ ನಾಯಕರ ಕೊರತೆ ಇದೆ ಎಂದು ಹೇಳಿದರು.

       ಸಮಾಜವನ್ನು ಕಟ್ಟಿದ ಹಿರಿಯರ ಕೊಡುಗೆ ಸಾಕಷ್ಟಿದೆ. ಹೀಗಾಗಿ ಈಗಿನ ಯುವಕರು ಹಿರಿಯರನ್ನು ಗೌರವದಿಂದ ಕಾಣುವದನ್ನು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಯಾವುದೇ ಕೊರತೆ ಇಲ್ಲ, ಎಲ್ಲವೂ ಇದೆ. ಆದರೆ, ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

       ನಮ್ಮ ಸಮಾಜದಲ್ಲಿಯೇ ನೂರೆಂಟು ಸಂಘಟನೆಗಳನ್ನು ಕಟ್ಟಿಕೊಂಡು, ನಾನು ಅಧ್ಯಕ್ಷ, ನಾನು ಅಧ್ಯಕ್ಷ ಎಂಬುದಾಗಿ ಹೇಳಿಕೊಳ್ಳುವುದು ಸರಿಯಲ್ಲ. ನಮ್ಮಲ್ಲಿರುವುದು ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕನಕ ಗುರುಪೀಠ ಕಾಗಿನೆಲೆ ಮಹಾಸಂಸ್ಥಾನ ಮಾತ್ರ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಆದ್ದರಿಂದ ಎಲ್ಲಾ ಸಂಘ ಸಂಸ್ಥೆಗಳನ್ನು ರದ್ದು ಪಡಿಸಿ, ಇವೆರಡರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಕರ್ನಾಟಕ ಪ್ರದೇಶದ ಕುರುಬರ ಸಂಘದ ಅಡಿಯಲ್ಲಿ ಜಿಲ್ಲಾ ಕುರುಬರ ಸಂಘ ಹಾಗೂ ಇದರ ಅಡಿಯಲ್ಲಿ ಇನ್ನುಳಿದ ಎಲ್ಲಾ ಸಂಘಟನೆಗಳು ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

       ಜಿಲ್ಲಾ ಕುರುಬರ ಸಂಘ ಹಾಗೂ ತಾಲೂಕು ಕುರುಬರ ಸಂಘಗಳ ಮಧ್ಯೆ ಪರಸ್ಪರ ಸಮನ್ವಯತೆ ಇಲ್ಲ. ಒಂದೊಂಕ್ಕೊಂದು ತಾಳ-ಮೇಳವಿಲ್ಲ. ಬುದ್ಧಿವಾದ ಹೇಳಿದರೆ, ಕೆಲವರು ಕುಡಿಸಿಬಿಟ್ಟು ಗಲಾಟೆ ಮಾಡಿಸಿ ರೌಡಿಸಂ ಮಾಡಿಸುತ್ತಾರೆ. ಇದಕ್ಕೆ ಹುಟ್ಟಿನಿಂದ ಸಾಯುವ ವರೆಗೂ ತಾನೊಬ್ಬನೇ ಅಧ್ಯಕ್ಷನಾಗಿರಬೇಕೆಂಬ ಮನೋಭಾವವೇ ಕಾರಣವಾಗಿದೆ. ಇದು ಸರಿಯಲ್ಲ ಬೇರೆಯವರಿಗೂ ಅವಕಾಶ ಮಾಡಿಕೊಟ್ಟು ವ್ಯವಸ್ಥಿತರೀತಿಯಲ್ಲಿ ಸಂಘಟಿತರಾಗಿ ಎಂದು ಕಿವಿಮಾತು ಹೇಳಿದರು.

       ದಾವಣಗೆರೆಯಲ್ಲಿ ಮೊದಲು ಕಟ್ಟಿದ ಶಾಲೆಯನ್ನು ಬಿಟ್ಟು, 80 ಲಕ್ಷ ರೂ. ವೆಚ್ಚದಲ್ಲಿ ಇನ್ನೊಂದು ಶಾಲೆ ನಿರ್ಮಿಸುತ್ತಿದ್ದೀರಿ. ಆದರೆ, ಮೊದಲಿನ ಶಾಲೆ ಏಕೆ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ? ಮಕ್ಕಳು ಏಕೆ ಬರುತ್ತಿಲ್ಲ ಎಂಬುದನ್ನು ನೋಡಬೇಕಲ್ವೆ? ಆದ್ದರಿಂದ ಈ ಬಗ್ಗೆ ಸಮಾಲೋಚನಾ ಸಭೆ ನಡೆಸಿ, ಮೂಲಭೂತ ಸೌಲಭ್ಯ ಕಲ್ಪಿಸುವುದರ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ, ಆ ಶಾಲೆಯನ್ನು ಬೆಳ್ಳೂಡಿ ಮಠಕ್ಕೆ ವಹಿಸಿಕೊಡಿ ಎಂದು ಸೂಚ್ಯವಾಗಿ ಎಚ್ಚರಿಸಿದರು.

      ನಮ್ಮಲ್ಲಾಗಿರುವ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿ, ಮಾದರಿ ಸಮಾಜ ನಿರ್ಮಾಣಕ್ಕೆ ಮೂಂದಾಗಬೇಕೆ ಹೊರತು, ಯಾವುದೇ ಕಾರಣಕ್ಕೂ ಸಮಾಜವನ್ನು ಹಿಂದಕ್ಕೆ ಎಳೆಯಬಾರದು ಎಂದ ಶ್ರೀಗಳು, ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಸಾಕಷ್ಟು ಹಿಂದುಳಿದಿದೆ. ಇರುವ ಶಿಕ್ಷಣ ಸಂಸ್ಥೆಗಳನ್ನು ಸರಿಯಾಗಿ ಕಟ್ಟದಿದ್ದರೆ, ಸಮಾಜಕ್ಕೆ ಭವಿಷ್ಯವಿಲ್ಲ ಎಂದರು.

       ತನ್ನೊಂದಿಗೆ ಇತರೆ ಹಿಂದುಳಿದ ಸಮುದಾಯಗಳು ಬೆಳೆಯಲಿ ಎಂಬ ಉದ್ದೇಶದಿಂದ ಎಲ್ಲಾ ಕಡೆಗಳಲ್ಲೂ ಕುರುಬರ ಸಾರ್ವಜನಿಕ ವಿದ್ಯಾರ್ಥಿ ನಿಲಯವನ್ನು ಆರಂಭಿಸಿದ್ದು ನಮ್ಮ ಸಮಾಜದ ಹೆಮ್ಮೆಯಾಗಿದೆ. ಇದರ ಉದ್ದೇಶ ಅಕ್ಷರ ಸಂಸ್ಕತಿಯಿಂದ ದೂರ ಇರುವ ಸಮಾಜಗಳು ಬರಬೇಕೆಂಬುದಾಗಿದೆ ಎಂದರು.

       ಮಾಜಿ ಶಾಸಕ ಕೆ.ಮಲ್ಲಪ್ಪ ಮಾತನಾಡಿ, ಕುರುಬರ ಹಾಸ್ಟೇಲ್‍ಗೆ ಸರ್ಕಾರದಿಂದ ಒಂದು ರೂಪಾಯಿಯೂ ಸಹ ಸರ್ಕಾರದಿಂದ ಅನುದಾನ ಪಡೆದಿರಲಿಲ್ಲ. ಸಮಾಜ ಹಾಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಹಾಸ್ಟೆಲ್ ಕಟ್ಟಿದ್ದೇವೆ. ಆದರೆ, ಈಗ ಏನಾಗಿದೆ ಎಂಬುದು ಗೊತ್ತಿಲ್ಲ. ತುಳಿತಕ್ಕೆ ಒಳಗಾಗಿದ್ದ ಸಮಾಜಗಳಿಗೆ ಶಕ್ತಿ ತುಂಬಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಕೃಷ್ಣರಾಜ ಒಡೆಯರ್, ವಿ.ಪಿ.ಸಿಂಗ್ ಹಾಗೂ ದೇವಸರಾಜ ಅರಸು ಅವರನ್ನು ನಾವು ಎಂದೂ ಸಹ ಮರೆಯಬಾರದು ಎಂದು ಸಲಹೆ ನೀಡಿದರು.

        ನಮ್ಮ ಈ ಹಾಸ್ಟೇಲ್‍ನಿಂದಲೇ 1967ರಲ್ಲಿ ಶ್ರೀಬೀರೇಶ್ವರ ವ್ಯಾಯಾಮಶಾಲೆಯನ್ನು ಆರಂಭಿಸಿದ್ದೇವು. ಇದಕ್ಕೆ ಕಾರಣ ಅಂದು ನಮ್ಮ ಹಾಸ್ಟೆಲ್‍ನಲ್ಲಿ ಎಲ್ಲಾ ಸಮುದಾಯಗಳ 150 ವಿದ್ಯಾರ್ಥಿಗಳು ಕಾರಣೀಭೂತರಾಗಿದ್ದಾರೆ. ಈ ವ್ಯಾಯಾಮ ಶಾಲೆಯಲ್ಲಿ ಬೆಳೆದ ಸುಮಾರು 35 ಜನ ಕ್ರೀಡಾಪಟುಗಳು ದೇಶ, ವಿದೇಶಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು.

       ಜಿಲ್ಲಾ ಕುರುಬರ ಸಂಘದ ಗೌರವಾಧ್ಯಕ್ಷ ಡಾ.ಕೆ.ಪಿ.ಸಿದ್ದಬಸಪ್ಪ ಮಾತನಾಡಿ, ಹಾಲುಮತದ ಇತಿಹಾಸವೂ ವೀರಶೈವಕ್ಕಿಂತಲೂ ಪುರಾತನವಾದದು. ಹೀಗಾಗಿ ನಾವು ಆದಿಶೈವರಾಗಿದ್ದೇವೆ. ಆದ್ದರಿಂದ ನಮ್ಮ ಸಂಘಟನೆಗೆ ಹಾಲುಮತ-ಆದಿಶೈವ ಎಂಬ ಹೆಸರಿಡಬೇಕು. ಈ ಬಗ್ಗೆ ಮೊದಲು ನಮ್ಮ ಜಿಲ್ಲೆಯಿಂದಲೇ ಚಾಲನೆ ಸಿಗಲಿ ಎಂದು ಹೇಳಿದರು.

       ಕನಕ ಗುರುಪೀಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿಯವರು ನೂತನವಾಗಿ ನಿರ್ಮಾಣವಾಗಿರುವ ಲಿಂ.ಶ್ರೀವೇದಮೂರ್ತಿ ಚನ್ನಯ್ಯ ಒಡೆಯರ್ ಸಂಕೀರ್ಣವನ್ನು ಉದ್ಘಾಟಿಸಿದರು. ಹದಡಿ ಚಂದ್ರಗಿರಿ ಮಠದ ಶ್ರೀಮುರಳೀಧರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕುರುಬರ ವಿದ್ಯಾವರ್ಧಕ ಸಮಘದ ಅಧ್ಯಕ್ಷ ಬಿ.ದಿಳ್ಳೆಪ್ಪ ಮುದಹದಡಿ ಅಧ್ಯಕ್ಷತೆ ವಹಿಸಿದ್ದರು.

       ವೇದಿಕೆಯಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಡಾಣಿ ಸಿದ್ದಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಸದಸ್ಯರಾದ ಹೆಚ್.ಬಿ.ಪರಶುರಾಮಪ್ಪ, ಕೆ.ಎಸ್.ಬಸವಂತಪ್ಪ, ಪಾಲಿಕೆ ಸದಸ್ಯರಾದ ಹೆಚ್.ಬಿ.ಗೋಣೆಪ್ಪ, ಹೆಚ್.ಜಿ.ತಿಪ್ಪಣ್ಣ, ಕನಕ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಜಿ.ಸಂಗಪ್ಪ, ಸಮಾಜದ ಮುಖಂಡರಾದ ಜೆ.ಕೆ.ಕೊಟ್ರಪ್ಪ, ಎಸ್.ನಿಂಗಪ್ಪ, ಬಿ.ಟಿ.ಹನುಮಂತಪ್ಪ, ಹೆಚ್.ಎಸ್.ರಾಜಶೇಖರ್, ಎನ್.ಜೆ.ನಿಂಗಪ್ಪ, ಎಲ್.ಬಿ.ಭೈರೇಶ್, ಬಳ್ಳಾರಿ ಷಣ್ಮುಖಪ್ಪ, ಹೆಚ್.ಎ.ಉಮೇಶ್, ಹೆಚ್.ವೈ.ಶಶಿಧರ್, ಹೆಚ್.ಯಲ್ಲಪ್ಪ, ಹಾಲೇಕಲ್ಲು ಎಸ್.ಟಿ. ಅರವಿಂದ, ವೈ.ವಿರೂಪಾಕ್ಷಪ್ಪ, ಎಸ್.ಎಸ್.ಗಿರೀಶ್, ಬಿ.ಲಿಂಗರಾಜ್, ಡಿ.ಜಿ.ಪ್ರಕಾಶ್, ಎಂ.ಕೆ.ಚಿಕ್ಕಪ್ಪ, ಮಾಯಕೊಂಡ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link