ದಾವಣಗೆರೆ:
ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ) ಮಸೂದೆಯನ್ನು ಅಂಗೀಕರಿಸಿರುವುದನ್ನು ವಿರೋಧಿಸಿ, ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆ, ನರ್ಸೀಂಗ್ ಹೋಂಗಳ ಹೊರ ರೋಗಿಗಳ ವಿಭಾಗ (ಒಪಿಡಿ)ಗಳ ಸೇವೆ ಸ್ಥಗಿತಗೊಳಿಸಿ ವೈದ್ಯರು ಬುಧವಾರ ಮುಷ್ಕರ ನಡೆಸಿದರು.
ಮುಷ್ಕರದ ಹಿನ್ನೆಲೆಯಲ್ಲಿ ನಗರದ ಬಾಪೂಜಿ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ ವೈದ್ಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಂತರದಲ್ಲಿ ನಿಯೋಗದ ಮೂಲಕ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಸೂದೆ ಅಂಗೀಕಾರಕ್ಕೆ ಕಿಡಿ:
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಾ.ಗಣೇಶ್ ಇಡಗುಂಜಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಗೆ ನಾವು(ವೈದ್ಯರು) ಆರಂಭ ದಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದೇವೆ. ಈ ವಿರೋಧದ ಮಧ್ಯೆಯೂ ಕೇಂದ್ರ ಸರ್ಕಾರ ಈ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ನೀಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆ ಬಡವರ ವಿರೋಧಿಯಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಶೇ 40ರಷ್ಟು ಸೀಟುಗಳಿಗೆ ಶುಲ್ಕ ನಿಗದಿ ಮಾಡುವ ಅಧಿಕಾರ ಸರ್ಕಾರದ ಬಳಿ ಇರಲಿದೆ. ಹಲವು ಲೋಪ ಹೊಂದಿರುವ ಈ ಮಸೂದೆ ರಾಜ್ಯಸಭೆಯಲ್ಲಿ ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ಒತ್ತಾಯಿಸಿದರು.
ವೈದ್ಯರಿಗೆ ಮರಣ ಶಾಸನ:
ಬಾಪೂಜಿ ಆಸ್ಪತ್ರೆಯ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ರವಿ ಮಾತನಾಡಿ, ಈ ಮಸೂದೆಯಲ್ಲಿರುವ ಕೆಲ ಕಾಯಿದೆಗಳು ವೈದ್ಯರ ಪಾಲಿಗೆ ಮರಣ ಶಾಸನವಾಗಿವೆ. ವೈದ್ಯಕೀಯ ಶಿಕ್ಷಣದ ಗಂಧ-ಗಾಳಿಯೇ ಗೊತ್ತಿರದ ಯುನಾನಿ, ಬಿ.ಎಸ್ಸಿ ನರ್ಸಿಂಗ್, ಆಯುರ್ವೇದ ಚಿಕಿತ್ಸೆ ನೀಡುತ್ತಿರುವ ಸುಮಾರು ಮೂರುವರೆ ಲಕ್ಷ ಜನ ವೈದ್ಯರ ಸರಿ ಸಮಾನವಾಗಿ ಪ್ರಾಕ್ಟಿಸ್ ಮಾಡಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೋಗಿಗಳ ಪ್ರಾಣಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ನರ್ಸಿಂಗ್ ಹೋಂ ಅಸೋಸಿಯೇಷನ್ ಕಾರ್ಯದರ್ಶಿ ಡಾ.ರವೀಂದ್ರನಾಥ್ ಮಾತನಾಡಿ, ನಾವು ಎಂಬಿಬಿಎಸ್ ಶಿಕ್ಷಣ ಪಡೆಯಲು ಸಾಕಷ್ಟು ಕಷ್ಟಪಟ್ಟು ವೈದ್ಯ ವೃತ್ತಿಯಲ್ಲಿದ್ದೇವೆ. ಆದರೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯಲ್ಲಿ ಬ್ರಿಡ್ಜ್ ಕೋರ್ಸ್ ಮೂಲಕ ಯುನಾನಿ, ಆಯುರ್ವೇದ, ಬಿ.ಎಸ್ಸಿ ನರ್ಸೀಂಗ್, ಪ್ಯಾರಾ ಮೆಡಿಕಲ್ ಮಾಡಿಕೊಂಡಿರುವವರಿಗೆ 6 ತಿಂಗಳ ಬ್ರಿಡ್ಜ್ ಕೋರ್ಸ್ ಮೂಲಕ ತರಬೇತಿ ನೀಡಿ, ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಕ್ಟಿಸ್ ಮಾಡಲು ಬಿಡುವುದಾಗಿ ಹೇಳುತ್ತಿರುವುದು ಅತ್ಯಂತ ಜನ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ಲೋಕಸಭೆಯಲ್ಲಿ ಅಂಗಿಕರಿಸಿರುವ ವೈದ್ಯರಿಗೆ ಮರಣ ಶಾಸನವಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಗೆ ರಾಜ್ಯಸಭೆಯಲ್ಲಿ ಯಾವುದೇ ಕಾರಣಕ್ಕೂ ಅಂಗಿಕಾರ ನೀಡಬಾರದು. ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರನಿರತ ವೈದ್ಯರು ಆಗ್ರಹಿಸಿದರು.
ಮುಷ್ಕರದಲ್ಲಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಕಾರ್ಯದರ್ಶಿ ಡಾ.ಪ್ರವೀಣ್ ಅಣ್ವೇಕರ್, ಡಾ.ಎಸ್.ಎಂ.ಬ್ಯಾಡಗಿ, ಡಾ.ಬಿ.ಎಸ್.ನಾಗಪ್ರಕಾಶ, ಡಾ.ಸಂಜೀವಶೆಟ್ಟಿ, ಡಾ.ಹರೀಶ, ಡಾ.ಪ್ರಸನ್ನ, ಡಾ.ರುದ್ರಮುನಿ ಅಂದನೂರು, ಡಾ.ಶುಕ್ಲಾ ಶೆಟ್ಟಿ, ಡಾ.ವಸುಧೇಂದ್ರ, ಡಾ.ಅನಿತಾ ರವಿ, ಔಷಧಿ ಮಾರಾಟ ಪ್ರತಿನಿಧಿಗಳ ಸಂಘದ ಕೆ.ಎಚ್.ಆನಂದರಾಜ, ನವೀನಕುಮಾರ, ಗಿರೀಶ, ಮಹಾವೀರ, ರಾಜು ಸೇರಿದಂತೆ ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.