ಚಿತ್ರದುರ್ಗ
ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಮಾ. 21 ರಿಂದ ಏ. 04 ರವರೆಗೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆ ಏ. 12 ರಿಂದ ಕೈಗೊಳ್ಳಲಾಗುತ್ತಿದ್ದು, ಎರಡೂ ಪ್ರಕ್ರಿಯೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ, ಗೊಂದಲ ರಹಿತವಾಗಿ ನಡೆಸಲು ಉತ್ತಮ ತಂತ್ರಾಂಶವನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬಳಸಲು ಮುಂದಾಗಿದ್ದು, ಈ ವರ್ಷ ಪರೀಕ್ಷೆಗೆ ರಾಜ್ಯದ 8. 41 ಲಕ್ಷ ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಚಿತ್ರದುರ್ಗ, ತುಮಕೂರು, ದಾವಣಗೆರೆ, ಶಿವಮೊಗ್ಗ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಸಿದ್ಧತೆ ಕುರಿತು ನಗರದ ಮಯೂರ ದುರ್ಗ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಸಂದರ್ಭಗಳಲ್ಲಿ ಎಷ್ಟೇ ಜಾಗರೂಕತೆ ವಹಿಸಿದರೂ, ವಿದ್ಯಾರ್ಥಿಗಳ ವಯಕ್ತಿಕ ವಿವರಗಳ ದಾಖಲೆ ಸಂಗ್ರಹ, ಮೌಲ್ಯಮಾಪನ, ಅಂಕಗಳ ನಮೂದು, ಸೇರಿದಂತೆ ನಾನಾ ವಿಷಯಗಳಲ್ಲಿ ಗೊಂದಲ ಉಂಟಾಗಿ ಪರೀಕ್ಷೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆ ಗೊಂದಲಮಯವಾಗಿರುತ್ತಿತ್ತು. ಈ ಎಲ್ಲ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದು, ಕಳೆದ ವರ್ಷ ಕೆಲ ಹಂತಗಳಲ್ಲಿ ಯಶಸ್ಸನ್ನು ಕಂಡಿದೆ ಎಂದರು
ಈ ವರ್ಷ ಇನ್ನಷ್ಟು ಸುಧಾರಣಾ ಕ್ರಮಗಳನ್ನು ತಂತ್ರಾಂಶದ ಮೂಲಕ ಕೈಗೊಳ್ಳಲು ಮುಂದಾಗಿದೆ. ಈ ವರ್ಷ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ 14430 ಪ್ರೌಢಶಾಲೆಗಳ ರೆಗ್ಯುಲರ್, ಖಾಸಗಿ, ರಿಪೀಟರ್ಸ್ ಸೇರಿದಂತೆ ಎಲ್ಲ ವರ್ಗದ ಒಟ್ಟು 8.41 ಲಕ್ಷ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ನೊಂದಣಿ ಮಾಡಿಸಿಕೊಂಡಿದ್ದಾರೆ. ಈ ವರ್ಷ ಪರೀಕ್ಷೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು
ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯು ವಿದ್ಯಾರ್ಥಿಯ ಮಹತ್ವಪೂರ್ಣ ಘಟ್ಟದ ದಾಖಲೆಯಾಗಿರುವುದರಿಂದ, ಇದನ್ನು ದೋಷರಹಿತವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶ ಮಂಡಳಿಯದ್ದು. ಈ ಹಿಂದೆ ಅಂಕಪಟ್ಟಿ ವಿವರ ತಿದ್ದುಪಡಿಗಾಗಿಯೆ ವಿದ್ಯಾರ್ಥಿಗಳು ಅವರ ಪೋಷಕರು ಮಂಡಳಿಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಇದೀಗ ದೋಷರಹಿತ ಅಂಕಪಟ್ಟಿ ನೀಡುವ ನಿಟ್ಟಿನಲ್ಲಿ ಮಂಡಳಿ ಮಹತ್ವದ ಕ್ರಮ ಕೈಗೊಂಡಿದೆ ಎಂದು ಸುಮಂಗಲ ತಿಳಿಸಿದರು
ಚಿತ್ರದುರ್ಗ ಜಿಲ್ಲೆಯಲ್ಲಿ 92 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, 22668 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳು ಡೌನ್‍ಲೋಡ್ ಮಾಡಿಕೊಂಡಿವೆ. ಈ ವರ್ಷದಿಂದ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಗಳು ಡಿಜಿಲಾಕರ್ ವ್ಯವಸ್ಥೆಯಲ್ಲಿ ಅಳವಡಿಸಲಾಗುವುದರಿಂದ, ಯಾವುದೇ ವಿದ್ಯಾರ್ಥಿ ಆನ್‍ಲೈನ್‍ನಲ್ಲಿಯೇ ಅಂಕಪಟ್ಟಿಯ ಪ್ರತಿಯನ್ನು ಪ್ರಿಂಟ್ ಮಾಡಿಕೊಳ್ಳಬಹುದು. ಅಂಕಪಟ್ಟಿ ಕಳೆದುಹೋಯಿತು ಎಂದು ಮಂಡಳಿಗೆ ಅಲೆದಾಡುವ ತೊಂದರೆ ಇನ್ನು ಮುಂದೆ ಇರುವುದಿಲ್ಲ ಎಂದು ಅವರು ಹೇಳಿದರು.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿಷಯಕ್ಕೆ ಗರಿಷ್ಠ 20 ಆಂತರಿಕ ಅಂಕ ನೀಡಲು ಅವಕಾಶವಿದ್ದು, ನಿಗದಿಗಿಂತ ಹೆಚ್ಚಿನ ಅಂಕ ನಮೂದಿಗೆ ಅವಕಾಶವಿಲ್ಲ. ಹೀಗಾಗಿ ಶಿಕ್ಷಕರು ತಪ್ಪೆಸಗಲು ಸಾಧ್ಯವಿಲ್ಲ. ಆಂತರಿಕ ಅಂಕ ನಮೂದಿಸುವ ಪ್ರಕ್ರಿಯೆ ಫೆ. 15 ರಿಂದ ಪ್ರಾರಂಭವಾಗಿದ್ದು, ಆನ್‍ಲೈನ್‍ನಲ್ಲಿ ಇದಕ್ಕಾಗಿಯೇ ಇರುವ ತಂತ್ರಾಂಶದಲ್ಲಿ ಆಂತರಿಕ ಅಂಕ ನಮೂದಿಸಲು ಫೆ. 28 ಕೊನೆಯ ದಿನವಾಗಿರುತ್ತದೆ ಎಂದು ನಿರ್ದೇಶಕರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ