ಹೊಸಪೇಟೆ :
ರೈತರ ಸಾಲಮನ್ನಾ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ಹಿತವನ್ನು ಕಾಪಾಡಿದೆ. ಹೀಗಾಗಿ ಪಕ್ಷದ ಮಹಿಳಾ ಕಾರ್ಯಕರ್ತರು ಉತ್ಸಾಹದಿಂದ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಕವಿತಾಸಿಂಗ್ ತಿಳಿಸಿದರು.
ಇಲ್ಲಿನ ಪಟೇಲನಗರದ ಶಾಸಕ ಆನಂದಸಿಂಗ್ ಅವರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ವಿಭಾಗದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದಂತೆ ರೈತರ ಸಾಲಮನ್ನಾ ಮಾಡಿ ನುಡಿದಂತೆ ನಡೆದಿದೆ. ಎಲ್ಲಾ ವರ್ಗದ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಅನೇಕ ಭಾಗ್ಯಗಳನ್ನು ನೀಡಿ ಅವರ ನೆರವಿಗೆ ಧಾವಿಸಿದೆ. ಹೀಗಾಗಿ ಮಹಿಳಾ ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕು. ಕಾರ್ಯಕರ್ತರು ನಿಷ್ಠೆಯಿಂದ ಪಕ್ಷಕ್ಕೆ ದುಡಿದರೆ ಎಲ್ಲರಿಗೂ ಅವಕಾಶಗಳು ಸಿಗುತ್ತವೆ. ಹೀಗಾಗಿ ಎಲ್ಲರೂ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಮಾ.8ರ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲಾ ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ ಮಾತನಾಡಿ, ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, 3 ಲಕ್ಷದವರೆಗೆ ಬಡ್ಡಿರಹಿತ ಸಾಲ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಸಾಲಮನ್ನಾ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪಕ್ಷದ ಕಾರ್ಯಕರ್ತರು ಈ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ, ಮುಖಂಡರಾದ ಡಿ.ವೆಂಕಟರಮಣ, ತಮ್ಮನಳ್ಳೆಪ್ಪ, ನಿಂಬಗಲ್ ರಾಮಕೃಷ್ಣ, ಬಳ್ಳಾರಿ ಮಾಜಿ ಮೇಯರ್ ನಾಗಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಉನ್ನಿಖಾಸಿಂ, ಹಡಗಲಿ ಬ್ಲಾಕ್ ಅಧ್ಯಕ್ಷೆ ಅಂಬುಜಾ, ಬಳ್ಳಾರಿ ಬ್ಲಾಕ್ ಅಧ್ಯಕ್ಷೆ ಮಲ್ಲೇಶ್ವರಿ, ನಗರಸಭೆ ಸದಸ್ಯೆ ನೂರ್ಜಹಾನ್ ಸೇರಿದಂತೆ ಇತರರು ಇದ್ದರು.