ಬ್ಯಾಡಗಿ:
ಇಲ್ಲಿನ ಅಂತರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ (ಫೆ.25) ರಂದು ಎರಡು ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿ ಆವಕವಾಗುವ ಮೂಲಕ ಪ್ರಸಕ್ತ ವರ್ಷದಲ್ಲಿ ಎರಡನೇ ಬಾರಿ 2 ಲಕ್ಷದ ಗಡಿ ದಾಟಿದೆ, ಆದರೆ ದರದಲ್ಲಿ ಮಾತ್ರ ಸ್ಥಿರತೆಯನ್ನು ಕಾಯ್ದುಕೊಳ್ಳುವ ಮೂಲಕ ರೈತ ಸಮುದಾಯದ ವಿಶ್ವಾಸವನ್ನು ಉಳಿಸಿಕೊಂಡಿದೆ.
ಸೋಮವಾರ ಮಾರುಕಟ್ಟೆಗೆ ಒಟ್ಟು 231228 ಲಕ್ಷ ಚೀಲಗಳಷ್ಟು ಆವಕವಾಗಿದ್ದು, ಡಿಮ್ಯಾಂಡ್ & ಸಪ್ಲೈ ಆಧಾರದ ಸರಕುಗಳ ದರ ನಿರ್ಧಾರವಾಗುವುದು ಸಹಜ, ಆದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಆವಕವಾಗಿದ್ದರೂ ಸಹ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಮೂಲಕ ರೈತಸ್ನೇಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಚ್ಚಾ ಬೆಳೆಗಳು ಮಾರುಕಟ್ಟೆ ದರಗಳಲ್ಲಿ ಕುಸಿತಗೊಂಡಾಗ ರೈತರು ಬೀದಿಗಿಳಿದು ಹೋರಾಟ ಮಾಡುವುದು ಸಹಜ ಅಂತೆಯೇ ಕಳೆದೆರಡು ವಾರದ ಹಿಂದೆ ರೈತರು ದರದಲ್ಲಿ ಕುಸಿತಗೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದರು.
ದಾಖಲೆಯ ಸಮೀಪಕ್ಕೆ ಬಂದ ಮಾರುಕಟ್ಟೆ: ಕಳೆದ 2018 ಮಾ.2 ರಂದು ಒಂದೇ ದಿವಸ ಮಾರುಕಟ್ಟೆ 2.64 ಲಕ್ಷ ಚೀಲಗಳಷ್ಟು ಆವಕವಾಗಿದ್ದು ಇಲ್ಲಿಯವರೆಗಿನ ದಾಖಲೆಯಾ ಗಿದೆ, ಆದರೆ ಕಳೆದ ಫೆ.11 ರಂದು ಸೋಮವಾರ 2.55 ಲಕ್ಷ ಚೀಲಗಳಷ್ಟು ಆವಕವಾಗುವ ಮೂಲಕ ಸ್ವಲ್ಪದಲ್ಲಿರಲ್ಲಿಯೇ ದಾಖಲೆಯನ್ನು ಹಿಂದಿಕ್ಕುವ ಹಂತಕ್ಕೆ ಬಂದು ಹೋಗಿತ್ತು, ಈದೀಗ ಮತ್ತೊಮ್ಮೆ 2.31 ಲಕ್ಷ ಚೀಲ ಆವಕಾಗುವ ಮೂಲಕ ಮತ್ತೊಮ್ಮೆ ದಾಖಲೆಯತ್ತ ಸಮೀಪಿಸಿದೆ.
ಎಲ್ಲೆಲ್ಲೂ ಮೆಣಸಿನಕಾಯಿ: ಭಾನುವಾರ ಬೆಳಿಗ್ಗೆಯಿಂದಲೇ ನಿರಂತರವಾಗಿ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿದವು, ಸಂಜೆ ವೇಳೆಗಾಗಲೇ ಮಾರು ಕಟ್ಟೆ ಆವರಣ ಬಹುತೇಕ ಭರ್ತಿಯಾಗಿತ್ತು, ಮತ್ತೆ ಟ್ರಾಫಿಕ್ ಜಾಮ್ ಸಮಸ್ಯೆ ಲಕ್ಷಣಗಳು ಕಾಣತೊಡಗಿದ ತಕ್ಷಣವೇ ಪೊಲೀಸ್ ಮತ್ತು ಎಪಿಎಂಸಿ ಸಿಬ್ಬಂದಿ ಅನ್‍ಲೋಡ್ ಆದಂತಹ ಲಾರಿಗಳನ್ನು ಹೊರ ಹಾಕುವಲ್ಲಿ ಯಶಸ್ವಿಯಾದರು, ಹೀಗಾಗಿ ಯಾವುದೇ ಸಮಸ್ಯೆಗಳಿಲ್ಲದೇ ಸೋಮವಾರ ವ್ಯಾಪಾರ ವಹಿವಾಟು ನಡೆಯಿತು. ಎಲ್ಲೆಡೆ ಚೀಲಗಳಿಂದ ಭರ್ತಿಯಾದ ಮಾರುಕಟ್ಟೆಯು ನೋಡುಗರ ಕಣ್ಮನ ಸೆಳೆಯುವಂತಿತ್ತು ಅದಾಗ್ಯೂ ಮಾರುಕಟ್ಟೆಗೆ ತಡವಾಗಿ ಬಂದಂತಹ 20 ಸಾವಿರಕ್ಕೂ ಅಧಿಕ ಚೀಲಗಳು ಲಾರಿಗಳಲ್ಲೇ ಉಳಿದುಕೊಂಡವು.
ಸೂಕ್ತ ಬಂದೋಬಸ್ತ: ಇತ್ತೀಚೆಗೆ ನಡೆದ ಪ್ರತಿಭಟನೆ ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ, ಸಿಪಿಐ ಭಾಗ್ಯವತಿ ಪಿಎಸ್‍ಐ ಮಹಾಂತೇಶ ನೇತೃತ್ವದ ತಂಡವು ಆಯಕಟ್ಟಿನ ಸ್ಥಳಗಳಲ್ಲಿ ತೀವ್ರ ನಿಗಾವಹಿಸಿದ್ದು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.
ಸೋಮವಾರ ದರದಲ್ಲಿ ಸ್ಥಿರತೆ:ಸೋಮವಾರ ಮಾರುಕಟ್ಟೆಯಲ್ಲಿನ ಒಟ್ಟು 249 ದಲಾಲಿ ಅಂಗಡಿಗಳಿಗೆ ಒಟ್ಟು 231228 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, 19534 ಲಾಟ್‍ಗಳಿಗೆ ಒಟ್ಟು 293 ವ್ಯಾಪಾರಸ್ಥರು ಖರೀದಿಯಲ್ಲಿ ಭಾಗವಹಿಸಿ 158109 ಬಾರಿ ಬಿಡ್ ಮಾಡಿದ್ದಾರೆ, ದರಗಳು ಸ್ಥಿರವಾಗಿದ್ದರೂ ಗುಣಮಟ್ಟವಿಲ್ಲದ ಸುಮಾರು 467 ಲಾಟ್‍ಗಳಿಗೆ ವ್ಯಾಪಾರಸ್ಥರು ಯಾವುದೇ ಬಿಡ್ ಮಾಡಲಿಲ್ಲ, ಕಡ್ಡಿತಳಿ ಕನಿಷ್ಠ 658 ಗರಿಷ್ಟ 12089 ಸರಾಸರಿ 9677, ಡಬ್ಬಿತಳಿ ಕನಿಷ್ಠ 1025 ಗರಿಷ್ಠ 14121 ಸರಾಸರಿ 10999, ಗುಂಟೂರ ತಳಿ ಗರಿಷ್ಠ 500 ಕನಿಷ್ಠ 6973 ಸರಾಸರಿ 4796 ರೂ.ಗಳಿಗೆ ಮಾರಾಟವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ