ದಾವಣಗೆರೆ
ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆಯಲ್ಲೂ ಅನೇಕ ಲೋಪಗಳಿದ್ದು, ಅನರ್ಹರಿಗೆ ಯೋಜನೆಯ ಕಾರ್ಡ್‍ಗಳು ವಿತರಣೆಯಾಗುತ್ತಿವೆ ಎಂದು ಎಐಟಿಯುಸಿ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಆರೋಪಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‍ಧನ್ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಹಲವಾರು ಯೋಜನೆಗಳಲ್ಲಿ ಲೋಪವಿದ್ದು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದೇರೀತಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆಯಲ್ಲೂ ಅನೇಕ ಲೋಪಗಳು ಇರುವ ಕಾರಣ ಯೋಜನೆಯ ಕಾರ್ಡುಗಳು ವಿದ್ಯಾರ್ಥಿಗಳಿಗೆ, ಸ್ವಯಂ ಉದ್ಯೋಗಿಗಳಿಗೆ, ರೈತರಿಗೆ ವಿತರಣೆಯಾಗುತ್ತಿವೆ ಎಂದು ಆಪಾದಿಸಿದರು.
ಕಾರ್ಮಿಕರಿಗಾಗಿ ಜಾರಿಯಾಗಿರುವ ಇಂತಹ ಅನೇಕ ಯೋಜನೆಗಳು ದುಡಿಯುವ ವರ್ಗವನ್ನು ತಲುಪದೇ, ದುಡಿಯದೇ ಇರುವ ವರ್ಗವನ್ನು ತಲುಪುತ್ತಿವೆ. ಅಧಿಕಾರಿಗಳು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‍ಧನ್ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕು. ಈ ಯೋಜನೆಯಡಿ ವೃದ್ಧಾಪ್ಯ ರಕ್ಷಣೆಗಾಗಿ ಮತ್ತು ಅಸಂಘಟಿತ ಕಾರ್ಮಿಕರಾದಂತಹ ರಿಕ್ಷಾ ಎಳೆಯುವವರು, ಬೀದಿ ಬದಿಯ ಮಾರಾಟಗಾರರು, ಮಧ್ಯಾಹ್ನದ ಊಟ ಪೂರೈಸುವ ಕಾರ್ಮಿಕರು, ಹೆಡ್‍ಲೋಡರ್‍ಗಳು, ಇಟ್ಟಿಗೆ ಗೂಡು ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಸಲಸದವರು, ಧೋಬಿಗಳು, ಗೃಹ-ಆಧಾರಿತ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಗಾರೆ ಕೆಲಸದವರು, ಚರ್ಮದ ಕೆಲಸಗಾರರು, ಆಡಿಯೊ-ವಿಡಿಯೋ ಕೆಲಸಗಾರರು, ಕೃಷಿ ಕಾರ್ಮಿಕರು ಸೇರಿದಂತೆ ಇತರೆ ಅಸಂಘಟಿತ ಕಾರ್ಮಿಕರನ್ನು ಈ ಯೋಜನೆಯ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿದರು.
ದೇಶದಲ್ಲಿ ಶೇ.7 ರಷ್ಟು ಮಾತ್ರ ಸಂಘಟಿತ ಕಾರ್ಮಿಕ ವರ್ಗವಿದೆ. ಇನ್ನುಳಿದ ಶೇ.93 ರಷ್ಟು ಅಸಂಘಟಿತ ಕಾರ್ಮಿಕವರ್ಗದವರಾದ ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಕ್ಷೌರಿಕರು, ದೋಬಿಗಳು ಸೇರಿದಂತೆ ಇಂತಹ ಅನೇಕ ಕಾರ್ಮಿಕರು ಈ ಯೋಜನೆಯ ಫಲ ಪಡೆಯಬೇಕು ಎಂದರು.
ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೇಂದ್ರ ಸರ್ಕಾರ ಈ ಬಾರಿ ಬಜೆಟ್‍ನಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‍ಧನ್ ಯೋಜನೆಯನ್ನು ಘೋಷಣೆ ಮಾಡಿದ್ದು, ಪ್ರಧಾನ ಮಂತ್ರಿಯವರು 15 ಸಾವಿರಕ್ಕಿಂತ ಕಡಿಮೆ ಮಾಸಿಕ ವರಮಾನವಿರುವ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅಸಂಘಟಿತ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‍ಧನ್ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿರುವ ಉದ್ದೇಶದಿಂದ ಕಾರ್ಡುಗಳ ವಿತರಣೆಯಲ್ಲಿ ಲೋಪದೋಷಗಳಾಗಿವೆ. ಅಧಿಕಾರಿಗಳು ಅವುಗಳನ್ನು ನಿವಾರಣೆ ಮಾಡಬೇಕು. ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಪಡಿಸಿ ಕಾರ್ಮಿಕರಿಗೆ ತಲುಪಿಸಬೇಕೆಂದು ತಾಕೀತು ಮಾಡಿದರು.
ಪ್ರಾಸ್ತಾವಿಕ ಮಾತನಾಡಿದ ಇಎಸ್‍ಐ ಅಧಿಕಾರಿ ಕು|| ಸುನೀತಾ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‍ಧನ್ ಯೋಜನೆಯ ಫಲಾನುಭವಿಗಳಾಗಲು ಅಸಂಘಟಿತ ಕಾರ್ಮಿಕರಾಗಿರಬೇಕು. 18 ರಿಂದ 40 ವರ್ಷದೊಳಗಿರಬೇಕು. 15 ಸಾವಿರಕ್ಕಿಂತ ಕಡಿಮೆ ಮಾಸಿಕ ವರಮಾನ ಹೊಂದಿರಬೇಕು. ಅರ್ಹರು ತಮ್ಮ ವಯೋಮಿತಿಗೆ ಅನುಗುಣವಾಗಿ ವಿಮೆ ಕಂತುಗಳನ್ನು ಪಾವತಿಸಬೇಕು. ಚಂದಾದರರಿಗೆ ಅವರ 60 ವರ್ಷದ ನಂತರ ಮಾಸಿಕ 3 ಸಾವಿರ ಪಿಂಚಣಿ ಮತ್ತು ಅವರ ಮರಣದ ನಂತರ ಚಂದಾದಾರರ ಸಂಗಾತಿ ಶೇ 50 ರಷ್ಟು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ವಿ ರಾಮಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್‍ರಾಜ್ ಜಾದವ್, ಬಳ್ಳಾರಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಮೊಹಮದ್ ಜಾಕೀರ್ ಇಬ್ರಾಹಿಂ ಮತ್ತಿತ್ತರರು ಉಪಸ್ಥಿತರಿದ್ದರು.