ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿರುವ ಚಿರತೆ

ತುರುವೇಕೆರೆ

       ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ-ಹರಿಕಾರನಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಕಳೆದ ಎರಡು ವಾರಗಳಿಂದ ತೋವಿನಕೆರೆ, ಅಕ್ಕಳಸಂದ್ರ ಗೊಲ್ಲರಹಟ್ಟಿ, ದೊಂಬರನಹಳ್ಳಿ ಗೊಲ್ಲರಹಟ್ಟಿ ಮತ್ತು ಚಿಮ್ಮನಹಳ್ಳಿ ಭಾಗಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮದ ನಾಯಿಗಳನ್ನು ಹಿಡಿದುಕೊಂಡು ತಿಂದಿದೆ.

        ಇದಾದ ಒಂದೆರಡು ದಿನಗಳಲ್ಲಿ ಹರಿಕಾರನಹಳ್ಳಿ ಗ್ರಾಮಸ್ಥರು ಬೆಳಗ್ಗೆ ತೋಟಕ್ಕೆ ತೆರಳಿದಾಗ ಶಿಂಷಾನದಿಯ ಅಣೆಯ ಗಿಡಗೆಂಟೆಗಳಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದರಿಂದಾಗಿ ರೈತರು ಭಯಭೀತರಾಗಿ ತೋಟಕ್ಕೆ ನೀರು ಬಿಡಲು ಹೋಗಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಗ್ರಾಮದ ಹೆಂಗಸರು ಹಸುಕರುಗಳನ್ನು ತೋಟಸಾಲಿಗೆ ಮೇಯಿಸಲು ಹೊಡೆದುಕೊಂಡು ಹೋಗಲೂ ಅಳುಕುತ್ತಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗೆ ದೂರು ನೀಡಿದಾಗ ಸ್ಥಳಕ್ಕೆ ಸಿಬ್ಬಂದಿಗಳು ಭೇಟಿ ನೀಡಿ ಚಿರತೆ ಸಂಚಾರದ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಶುಕ್ರವಾರ ಊರ ಹೊರಗೆ ಚಿರತೆ ಸೆರೆಯಿಡಲು ಬೋನನ್ನು ಇಡಲಾಗಿದೆ.

      ದೊಂಬರನಹಳ್ಳಿ ಗ್ರಾಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನೂರಾರು ವಿದ್ಯಾರ್ಥಿಗಳು ಓದಲು ಬರುತ್ತಾರೆ. ಸಂಜೆ ಮತ್ತು ಬೆಳಗ್ಗೆ ವಿಶೇಷ ತರಗತಿಗಳಿಗೆ ಬರುವ ಒಂಟಿ ಮಕ್ಕಳ ಮೇಲೆ ಚಿರತೆ ದಾಳಿ ನಡೆಸಿದರೆ ಗತಿಯೇನು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೊಂಬರನಹಳ್ಳಿ ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link