ಸಮಸಮಾಜ ನಿರ್ಮಾಣವೇ ಶರಣರ ಆಶಯ

ಚಿತ್ರದುರ್ಗ :

        ಬಸವಾದಿ ಶರಣರಿಗೆ ಬದುಕಿನ ಬದ್ಧತೆ ಇತ್ತು. ಪ್ರಯತ್ನದ ಮೂಲಕ ಸಮ ಸಮಾಜವನ್ನು ಕಟ್ಟಬೇಕೆಂಬುದು ಅವರ ಆಶಯವಾಗಿತ್ತು. ಅವರೆಲ್ಲ ವ್ಯಷ್ಟಿ ಬದುಕನ್ನು ಚಿಂತಿಸದೆ ಸಮಷ್ಠಿಯ ಕಡೆಗೆ, ಸಮೂಹ ಜೀವನದ ಕಡೆಗೆ ನಡೆದರು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

       ಬಸವಕೇಂದ್ರ ಶ್ರೀಮುರುಘಾಮಠ, ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಚಿತ್ರದುರ್ಗ ಇವರ ಆಶ್ರಯದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಜಾಗತಿಕ ಶಾಂತಿ ಮತ್ತು ಶರಣಸಂಸ್ಕೃತಿ ವಿಷಯ ಕುರಿತು ಶ್ರೀಗಳು ಮಾತನಾಡಿದರು

         ಶರಣರ ಕಾಯಕ ವೈಯಕ್ತಿಕವಾಗಿತ್ತು. ಅದರ ಫಲ ಸಾರ್ವತ್ರಿಕವಾಗಿತ್ತು. ಇಂದು ಅನೇಕರು ಪೂಜೆಯನ್ನು ಕಾಯಕ ಎಂದುಕೊಂಡಿದ್ದಾರೆ. ಶರಣಸಂಸ್ಕೃ ತಿಯ ಜೀವಾಳ ಕಾಯಕ. ಕಾಯಕದ ಜೀವಾಳ ದಾಸೋಹ. ಶರಣರು ಕಾಯಕವನ್ನು ದಾಸೋಹಕ್ಕಾಗಿ ಮಾಡುತ್ತಿದ್ದರು. ಸಂಸ್ಕೃತಿಯನ್ನು ಮಾನವೀಕರಣಗೊಳಿಸುವ ಕೆಲಸ ಮಾಡಿದರು. ಅದು ಸಂವೇದನಾಶೀಲವಾದ ಸಂಸ್ಕೃತಿ. ನಿವೇದನೆ ಎಲ್ಲಿ ಇರುತ್ತದೋ ಅಲ್ಲಿ ಸಂವೇದನೆ ಇರುತ್ತದೆ.

       ಕಾಯಾರ್ಪಣ, ಕರುಣಾರ್ಪಣೆ ಮತ್ತು ಭಾವಾರ್ಪಣೆಗೆ ಶರಣರು ಒಳಗಾಗಿದ್ದರು. ಇಡೀ ಸಂಸ್ಕೃತಿಯ ಹೃದಯಭಾಗ ಜಾಗತಿಕ ಶಾಂತಿ. ಜನರಲ್ಲಿರುವ ವೈರುಧ್ಯಗಳನ್ನು ಒಂದುಗೂಡಿಸಲು ಮತ್ತು ಮೇಲುಕೀಳು ಭಾವನೆಯನ್ನು ಕಿತ್ತೊಗೆಯಲು, ಅನ್ಯಾಯ, ಅಸಮಾನತೆ ಮತ್ತು ಅಕ್ರಮಗಳನ್ನು ನಿವಾರಣೆ ಮಾಡಲು ಕ್ರಾಂತಿ ಮಾಡಿದರು. ಕ್ರಾಂತಿಯ ಉದ್ದೇಶ ಶಾಂತಿ ಸ್ಥಾಪಿಸುವುದಾಗಿತ್ತು. ಎಲ್ಲಿ ಅಸಹನೆ ಇರುತ್ತದೋ ಅಲ್ಲಿ ಅಶಾಂತಿ ಇರುತ್ತದೆ ಎಂದು ತಿಳಿಸಿದರು.

       ಮುಖ್ಯಅತಿಥಿ ದಾವಣಗೆರೆ ಎವಿಕೆ ಮಹಿಳಾ ಪ.ಪೂ. ಕಾಲೇಜು ಉಪನ್ಯಾಸಕಿ ಶ್ರೀಮತಿ ಎಂ.ಸಿ. ಗೀತಾ ಬಸವರಾಜು ವಿಷಯಾವಲೋಕನ ಮಾಡುತ್ತ, ಅನಿಷ್ಟ ಪದ್ಧತಿಗಳಿಗೆ ದಿವ್ಯಔಷಧಿ ಕೊಟ್ಟದ್ದು ವಚನಕಾರರು. ವಿಶ್ವಮಟ್ಟದ ಸಾಹಿತ್ಯದಲ್ಲಿ ವಚನ ಸಾಹಿತ್ಯ ಒಂದು ಮೈಲಿಗಲ್ಲು. ಬಸವಾದಿ ಶರಣರು ಮುರಿದುಹೋದ ಮನಸ್ಸುಗಳನ್ನು ಕಟ್ಟಿದರು. ಮಾನವ ದೇವನಾಗುವ ಪರಿಕಲ್ಪನೆ ಅವರದ್ದು. ನಾವೆಲ್ಲರೂ ಒಂದಾಗಬೇಕು ಎಂಬುದು ಬಸವಣ್ಣನವರ ಕಲ್ಪನೆ. ಮನುಷ್ಯನ ಮನಸ್ಸುಗಳು ಕೊಳೆಯಾದರೆ ಅವನ್ನು ಶುಚಿ ಮಾಡಲು ವಚನಗಳು ತೀರಾ ಅವಶ್ಯಕ. ದಯೆ ಧರ್ಮದ ಅರ್ಥ ತಿಳಿದುಕೊಳ್ಳಬೇಕಿದೆ. ನಮ್ಮಲ್ಲಿ ಸುಸಂಸ್ಕೃತಿ ಬರಬೇಕಿದೆ. ಬಸವಧರ್ಮ ವಿಶ್ವಧರ್ಮವನ್ನು ಕೇಂದ್ರೀಕರಿಸಿ ಕೊಂಡಿರುವಂತಹದ್ದು. ಶಾಂತಿಯನ್ನು ನಾವು ಹುಡುಕಿಕೊಂಡು ಹೋಗಬಾರದು. ಅದು ನಮ್ಮೊಳಗೇ ಇದೆ ಎಂದರು.

          ಶಿರಗುಪ್ಪ ಶ್ರೀ ಬಸವಭೂಷಣ ಸ್ವಾಮಿಗಳು ಮಾತನಾಡಿ, ಬಸವಾದಿ ಶರಣರು ಸತ್ಯದ ಹಾದಿಯಲ್ಲಿ ನಡೆದವರು. ಹಾಗಾಗಿ ಅವರು ಸದಾ ಶಾಂತಿಪ್ರಿಯರಾಗಿದ್ದರು. ಸದಾ ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಇರಬೇಕು. ಮಾನವ ಕುಲವನ್ನು ಬೆಳಗಲು ಶರಣಸಂಸ್ಕೃತಿ ಅತ್ಯವಶ್ಯಕ ಎಂದು ನುಡಿದರು.

        ಜಮುರಾ ಕಲಾವಿದರು ವಚನಪ್ರಾರ್ಥನೆ ನಡೆಸಿಕೊಟ್ಟರು. .ಜಿ.ಎನ್. ಬಸವರಾಜಪ್ಪ ಸ್ವಾಗತಿಸಿದರು. ಕು| ಸ್ನೇಹ ನಿರೂಪಿಸಿದರು. .ಹೆಚ್.ಕೆ. ಶಿವಪ್ಪ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap