ಬೆಂಗಳೂರು:

ತಾವು ಈ ಬಾರಿ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಷ್ ಘೋಷಣೆ ಮಾಡಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ದಿವಂಗತ ನಟ ಅಂಬರೀಶ್ ಪತ್ನಿ ಸುಮಲತಾ ಇಂದು ತಮ್ಮ ಅಂತಿಮ ನಿರ್ಧಾರವನ್ನ ಪ್ರಕಟಿಸಿದ್ದು, ಇದೆ 20 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಸ್ಯಾಂಡಲ್ ವುಡ್ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಂದು ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು, ಸುಮಲತಾ ಅಂಬರೀಶ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಸುಮಲತಾ, ಅಂಬರೀಷ್ ತೀರಿಹೋದ ಬಳಿಕ ಮಂಡ್ಯದ ಜನರು ನಮ್ಮ ದುಃಖ ಹಂಚಿಕೊಂಡರು. ಅಂಬರೀಶ್ ಇಲ್ಲ ಎಂದು ನೀವು ಯೋಚಿಸಬೇಡಿ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದವರೇ ನನ್ನ ಮಂಡ್ಯದ ಜನತೆ. ಇಂತಹ ಮಂಡ್ಯ ಜನರ ಸೇವೆಯನ್ನು ಮಾಡಬೇಕು ಎಂದಿದ್ದಾರೆ.
ಈ ಪ್ರೀತಿ ವಿಶ್ವಾಸ ಕಳೆದುಕೊಳ್ಳುವ ಮನಸ್ಸು ನಮಗೆ ಇಲ್ಲ. ನಾನು ರಾಜಕಾರಣಿಯೂ ಅಲ್ಲ. ರಾಜಕೀಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಪಾಡಿಗೆ ನಾನು, ಅಭಿ ಶಾಂತಿಯಿಂದ ಜೀವಿಸಬಹುದಿತ್ತು. ನಮಗೇನೂ ಕಡಿಮೆ ಇರಲಿಲ್ಲ. ಆದರೆ ಮಂಡ್ಯ ಜನತೆಯ ಸೇವೆಯನ್ನು ಅಂಬರೀಶ್ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಇದೇ ಮಾತನ್ನು ಅನೇಕರು ಹೇಳಿ, ಆ ಕೆಲಸವನ್ನು ಮುಂದುವರೆಸುವಂತೆ ತಿಳಿಸಿದ್ದಾರೆ.
ಇಂತಹ ಮಂಡ್ಯ ಜನರ ಸೇವೆಯನ್ನು ಮಾಡಬೇಕು. ಜನರ ಮನಸಲ್ಲಿರೋದನ್ನ ತಿಳಿಯೋ ಪ್ರಯತ್ನ ಮಾಡಿದೆ. ಮಂಡ್ಯ ಜಿಲ್ಲೆಯ ಸಾವಿರಾರು ಜನರನ್ನ ಭೇಟಿ ಮಾಡಿದೆ. ಅವರೆಲ್ಲರಲ್ಲೂ ಕೇಳಿ ಬಂದ ನಾವು ಅಂಬರೀಷ್ ಅವರನ್ನು ಬಿಟ್ಟುಕೊಡಲು ಸಿದ್ದರಿಲ್ಲ. ಈ ಪ್ರೀತಿ ವಿಶ್ವಾಸ ಹಾಗೇ ಉಳಿಯಬೇಕು. ಆದ್ದರಿಂದ ಮಂಡ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಸೋಮವಾರ ಘೋಷಿಸಿದ್ದಾರೆ.
ಇನ್ನು “ನನಗೆ ಧೈರ್ಯ ಹಾಗೂ ಶಕ್ತಿ ತುಂಬಲು ರಾಕ್‌ಲೈನ್ ವೆಂಕಟೇಶ್, ಯಶ್ ಹಾಗೂ ದರ್ಶನ್‌ಜತೆಗಿದ್ದಾರೆ. ಯಾರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಲ್ಲ” ಎಂದು ಸುಮಲತಾ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








