ವಿಜೃಭಂಣೆಯಿಂದ ನಡೆದ ಬಸವೆಶ್ವರ ದೇವರ ರಥೋತ್ಸವ…!!!

ಹೊನ್ನಾಳಿ:

      ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಬಸವೇಶ್ವರ ದೇವರ ರಥೋತ್ಸವ ಮತ್ತು ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ವೀರಗಾಸೆ ಕಲಾವಿದರ ನೃತ್ಯ, ವಿವಿಧ ವಾದ್ಯಮೇಳಗಳ ಮಂಗಳಘೋಷ ರಥೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿತು. ಅಲಂಕೃತ ರಥಕ್ಕೆ ಭಕ್ತರು ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ರಥ ಮುಂದಕ್ಕೆ ಚಲಿಸಿದ ನಂತರ ಭಕ್ತರು ನೆಲದ ಮೇಲೆ ಬಿದ್ದ ಮೆಣಸಿನಕಾಳುಗಳನ್ನು ಆಯ್ದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

       ಮಧ್ಯಾಹ್ನ 3 ಗಂಟೆಗೆ ಗ್ರಾಮದಲ್ಲಿ ಬೆಲ್ಲದ ಬಂಡಿ ಮೆರವಣಿಗೆ ನಡೆಯಿತು. ನಂತರ ಓಕುಳಿ ಆಡಲಾಯಿತು. ಯುವಕರು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಸಂಭ್ರಮಿಸಿದರು. ಸಂಜೆ 7ಗಂಟೆಗೆ ಬಸವೇಶ್ವರ ದೇವರ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ವಿವಿಧ ವಾದ್ಯಮೇಳಗಳೊಂದಿಗೆ ನೆರವೇರಿತು.

       ಭಾನುವಾರ ಬೆಳಿಗ್ಗೆ ಸಣ್ಣ ತೇರು(ಉಚ್ಛಾಯ ಮಹೋತ್ಸವ) ಗ್ರಾಮದ ರಾಜಬೀದಿಗಳಲ್ಲಿ ನಡೆಯಿತು. ಅಂದು ಗ್ರಾಮದ ಮುತ್ತೈದೆಯರು ವಿವಿಧ ವಾದ್ಯಮೇಳಗಳೊಂದಿಗೆ ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ತೆರಳಿ ಬಾಯಿ ಬೀಗ ಸೇವೆ ಸಲ್ಲಿಸಿದರು. ಮುತ್ತೈದೆಯರು, ಮಕ್ಕಳು ಉರುಳು ಸೇವೆ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ಒಣ ಕೊಬ್ಬರಿ ಸುಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

        ರಥೋತ್ಸವಕ್ಕೆ ಆಗಮಿಸಿದ ಎಲ್ಲ ಭಕ್ತರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ತರಗನಹಳ್ಳಿ ಗ್ರಾಮದ ಶ್ರೀಮತಿ ಮಳಳ್ಳಿ ಹಾಲಮ್ಮ ಮತ್ತು ಮಕ್ಕಳು ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಹೂವನ್ನು ಸಮರ್ಪಿಸಿದರು.

        ರಥೋತ್ಸವಕ್ಕೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆ ಸೇರಿದಂತೆ ತಾಲೂಕಿನಾದ್ಯಂತ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಆಗಮಿಸಿದ್ದರು. ಹರಕೆ ಹೊತ್ತ ಭಕ್ತರು ಕುಟುಂಬದವರೊಂದಿಗೆ ಆಗಮಿಸಿ ತಮ್ಮ ಮಕ್ಕಳ ಜವುಳ ಕಾರ್ಯವನ್ನು ಸ್ವಾಮಿಯ ಸನ್ನಿಧಿಯಲ್ಲಿ ನೆರವೇರಿಸಿದರು.

        ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗಪ್ಳರ ಬಸವರಾಜಪ್ಪ, ಕಾರ್ಯದರ್ಶಿ ನಾಗನೂರು ಬಸವರಾಜಪ್ಪ, ನಿರ್ದೇಶಕರಾದ ತರಗನಹಳ್ಳಿ ಟಿ.ಜಿ. ರಮೇಶ್‍ಗೌಡ, ಕೆ.ಸಿ. ಪ್ರಭಾಕರ್, ಹೊಳೆಬಸಪ್ಪ, ಮಹೇಶ್ವರಪ್ಪ, ತಿಪ್ಪೇಶಪ್ಪ, ಬಿ. ಮಹೇಶ್, ಭೋವಿ ಪುಟ್ಟಪ್ಪ, ತರಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಿ. ಪರಮೇಶ್ವರಪ್ಪ, ಮುಖಂಡರಾದ ಎ. ಮಲ್ಲಿಕಾರ್ಜುನಪ್ಪ, ದಾನಿಗಳಾದ ಟಿ.ಜಿ. ಮೃತ್ಯುಂಜಯಪ್ಪ ಮತ್ತು ಮಕ್ಕಳು, ಯಕ್ಕನಹಳ್ಳಿ ಟಿ. ಬಸವರಾಜಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿಪಂ ಸದಸ್ಯೆ ದೀಪಾ ಜಗದೀಶ್, ಯಕ್ಕನಹಳ್ಳಿ ಟಿ.ಎಸ್. ಜಗದೀಶ್ ರಥೋತ್ಸವದ ವೇಳೆ ಹಾಜರಿದ್ದು, ತಮ್ಮ ಭಕ್ತಿ ಸೇವೆ ಸಮರ್ಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link