ಲೋಕಸಭಾ ಚುನಾವಣೆ : 725 ರೌಡಿಗಳನ್ನು ವಶಕ್ಕೆ ಪಡೆದ ಪೊಲೀಸರು…!!

ಬೆಂಗಳೂರು

         ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಗ್ನೇಯ ಹಾಗೂ ಈಶಾನ್ಯ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಸುಮಾರು 725 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

       ಆಗ್ನೇಯ ವಿಭಾಗದ ಕೋರಮಂಗಲ, ಮಡಿವಾಳ, ಬೊಮ್ಮನ ಹಳ್ಳಿ, ಪರಪ್ಪನ ಅಗ್ರಹಾರ ಸೇರಿ ಬಹತೇಕ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂದು ಮುಂಜಾನೆಯಿಂದ ದಾಳಿ ನಡೆಸಿ ಸುಮಾರು 325 ಮಂದಿ ರೌಡಿಗಳನ್ನು ವಶಕ್ಕೆ ತೆಗೆದುಕೊಂಡು ಕೋರಮಂಗಲ ಶಸ್ತ್ರಾಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆ ತಂದು ವಿಚಾರಣೆ ನಡೆಸಲಾಯಿತು.

        ಲೋಕಸಭಾ ಚುನಾವಣೆಯ ವೇಳೆ ಶಾಂತಿ ಸುವ್ಯವಸ್ಥೆಗೆ ಭಂಗ ತರುವುದು, ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಅಪರಾಧ ಕೃತ್ಯಗಳನ್ನು ನಡೆಸುವುದು, ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗುವುದು, ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಗೂಂಡಾಕಾಯ್ದೆ ದಾಖಲಿಸಲಾಗುವುದು ಎಂದು ಡಿಸಿಪಿ ಇಶಾಪಂಥ್ ಎಚ್ಚರಿಸಿದರು.

        ರೌಡಿಗಳು ಮಾಡುತ್ತಿರುವ ಉದ್ಯೋಗ, ವಾಸದ ವಿಳಾಸ, ದೂರವಾಣಿ ಸಂಖ್ಯೆ, ಸಂಬಂಧಿಕರ ವಿವರ, ಇನ್ನಿತರ ಪೂರ್ವಾಪರಗಳನ್ನು ದಾಖಲಿಸಿಕೊಳ್ಳಲಾಯಿತು. ರೌಡಿಗಳ ಸಹಚರರು ಮಾಹಿತಿ ಪಡೆದುಕೊಂಡು ಅವರ ಮನೆಗಳ ಮೇಲೂ ದಾಳಿ ನಡೆಸಲು ಪೊಲೀಸರು ಮುಂದಾಗಿದ್ದಾರೆ.

         ಆಗ್ನೇಯ ವಲಯದಲ್ಲಿ ಸುಮಾರು 800 ಮಂದಿ ರೌಡಿಗಳಿದ್ದು, ಅವರಲ್ಲಿ ಅರ್ಧದಷ್ಟು ಮಂದಿ ರೌಡಿ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅಂತವರನ್ನು ರೌಡಿ ಪಟ್ಟಿಯಿಂದ ಕೈಬಿಡುವ ಬಗ್ಗೆಯೂ ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.

ಈಶಾನ್ಯದಲ್ಲಿ ದಾಳಿ

        ಈಶಾನ್ಯ ವಿಭಾಗದ ಯಲಹಂಕ, ಕೊಡಿಗೆಹಳ್ಳಿ, ಸಂಪಿಗೆಹಳ್ಳಿ, ಬಾಗಲೂರು, ಕೊತ್ತನೂರು, ಅಮೃತಹಳ್ಳಿ, ದೇವನಹಳ್ಳಿ, ಚಿಕ್ಕಜಾಲ ಸೇರಿದಂತೆ, 11 ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿಗಳ ಮನೆಗಳ ಮೇಲೆ ಮುಂಜಾನೆಯಿಂದಲೇ ದಾಳಿ ನಡೆಸಿರುವ ಪೊಲೀಸರು 435 ಮಂದಿ ರೌಡಿಗಳನ್ನು ಕರೆತಂದು ವಿಚಾರಣೆ ನಡೆಸಿ, ಮಾಹಿತಿ ಪಡೆದರು.

         ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಅಪರಾಧ ಕೃತ್ಯಗಳನ್ನು ನಡೆಸುವುದು, ಚುನಾವಣಾ ಅಕ್ರಮಗಳಲ್ಲಿ ಪಾಲ್ಗೊಳ್ಳುವುದು, ಕಾನೂನು ಬಾಹಿರ ಕೃತ್ಯಗಳಿಗೆ ಪ್ರೋತ್ಸಾಹ ನೀಡುವುದು, ಇನ್ನಿತರ ಕೃತ್ಯಗಳಲ್ಲಿ ಭಾಗಿಯಾಗದಂತೆ, ರೌಡಿಗಳಿಗೆ ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ಎಚ್ಚರಿಕೆ ನೀಡಿದರು.

         ದಾಳಿ ನಡೆಸಿದ ರೌಡಿಗಳ ಮನೆಗಳಲ್ಲಿ ಮಚ್ಚು, ಲಾಂಗ್, ಇನ್ನಿತರ ಮಾರಕಾಸ್ತ್ರಗಳು ದೊರೆತಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ರೌಡಿಗಳು ಬಳಸುತ್ತಿರುವ ಮೊಬೈಲ್ ಸಂಖ್ಯೆ, ವಾಸದ ವಿಳಾಸ, ಸಂಬಂಧಿಕರ ವಿಳಾಸಗಳನ್ನು ಕಲೆಹಾಕಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

          ಚುನಾವಣೆಯ ವೇಳೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ, ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಕಾನೂನನ್ನು ಕೈಗೆತ್ತಿಕೊಂಡು ಶಾಂತಿಗೆ ಭಂಗ ತಂದರೆ, ಅಂತಹವರನ್ನು ಗೂಂಡಾಕಾಯ್ದೆಯಡಿ ಬಂಧಿಸಿ, ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

          ರೌಡಿ ಚಟುವಟಿಕೆಗಳಿಂದ ದೂರವಿರುವವರನ್ನು ಗುರುತಿಸಿ ಚುನಾವಣೆಯ ನಂತರ ಅವರನ್ನು ರೌಡಿಪಟ್ಟಿಯಿಂದ ತೆಗೆಯುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ರೌಡಿಗಳ ಜೊತೆಗೆ ಹಳೆಅಪರಾಧಿಗಳು,ನ್ಯಾಯಾಲಯದ ವಾರೆಂಟ್ ಜಾರಿಯಾಗಿದ್ದರೂ, ಪೊಲೀಸರ ಕಣ್ತಪ್ಪಿಸಿ ಓಡಾಡುವವರನ್ನು ವಶಕ್ಕೆ ತೆಗೆದುಕೊಂಡು ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link