ಬೆಂಗಳೂರು
ಖ್ಯಾತ ನಟ ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಯ ಬಂಧನಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.ಕಲ್ಲು ತೂರಾಟದ ಬಗ್ಗೆ ದರ್ಶನ್ ಅವರ ಮ್ಯಾನೇಜರ್ ಶ್ರೀನಿವಾಸ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ದುಷ್ಕರ್ಮಿಯ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ
ಕಲ್ಲು ತೂರಾಟದ ಸಂಬಂಧ ಶ್ರೀನಿವಾಸ್ ನೀಡಿರುವ ದೂರಿನಲ್ಲಿ ನಾನು ಸುಮಾರು 15 ವರ್ಷಗಳಿಂದ ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ದರ್ಶನ್ 19ರಂದು `ಒಡೆಯ’ ಸಿನಿಮಾ ಶೂಟಿಂಗ್‍ಗಾಗಿ ಹೈದರಾಬಾದ್‍ಗೆ ಹೋಗಿ ಮರುದಿನ ಮಂಡ್ಯಕ್ಕೆ ಬಂದು ಮತ್ತೆ ಹೈದರಾಬಾದ್‍ಗೆ ಹೋಗಿದ್ದರು ದರ್ಶನ್ ಅವರಿಗೆ ಸೇರಿದ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ತೂಗದೀಪ ನಿಲಯ ಹೆಸರಿನ ಮನೆಗೆ ಸೆಕ್ಯೂರಿಟಿ ಗಾರ್ಡ್‍ಗಳಾದ ಕೆಂಪೇಗೌಡ ಹಾಗೂ ಪವನ್ ಕಾವಲಿಗಿದ್ದರು.
ಮಾ.22ರ ಮಧ್ಯರಾತ್ರಿ ಸುಮಾರು 12.54ರ ವೇಳೆ ದುಷ್ಕರ್ಮಿಯೊಬ್ಬ ದರ್ಶನ್ ಅವರ ಮನೆಯ ಬಳಿಗೆ ನಡೆದುಕೊಂಡು ಬಂದು ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸ್ ಹೊಡೆದು, ಮನೆಯ ಮುಂದೆ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್ ಹರಿದಿದ್ದಾನೆ.ಸೆಕ್ಯೂರಿಟಿ ಗಾರ್ಡ್ ಕೆಂಪೇಗೌಡ ಅವರು ಹೊರ ಬಂದಾಗ ಕಲ್ಲಿನಿಂದ ಮನೆಯ ಗ್ಲಾಸ್ ಒಡೆದ ವ್ಯಕ್ತಿಯು ಅಲ್ಲಿಂದ ಓಡಿ ಹೋಗಿದ್ದಾನೆ. ಈ ವಿಚಾರವನ್ನು ಸೆಕ್ಯೂರಿಟಿ ಗಾರ್ಡ್ ಈ ದಿನ ನನ್ನ ಬಳಿ ಹೇಳಿದ್ದಾನೆ. ದರ್ಶನ್ ಅವರ ಮನೆಯ ಕಿಟಕಿ ಗ್ಲಾಸ್ ಕಲ್ಲಿನಿಂದ ಹೊಡೆದು ಜಖಂಗೊಳಿಸಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಕ್ಯಾಮಾರದಲ್ಲಿ ಅಸ್ಪಷ್ಟ
ಪ್ರಕರಣ ದಾಖಲಿಸಿಕೊಂಡು ಕಲ್ಲು ತೂರಾಟ ಮಾಡಿದವನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.ಕ್ಯಾಮಾರದಲ್ಲಿ ಕಾಣದಂತೆ ಆರೋಪಿ ಓಡಿ ಹೋಗಿದ್ದಾನೆ. ಆದರೆ ಒಂದೆರಡು ಫೂಟೇಜ್‍ಗಳಲ್ಲಿ ಆರೋಪಿ ಕಾಣಿಸಿಕೊಂಡಿದ್ದು, ಅದು ಕೂಡ ಅಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಆರೋಪಿ ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಎನ್ನುವ ವಿಚಾರ ಲಭ್ಯವಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆಡಿಯೋ ವೈರಲ್
ಅಂಬರೀಶ್ ಚುನಾವಣೆಯಲ್ಲಿ ಸೋಲುಂಡ ವೇಳೆ ಮಂಡ್ಯ ಜನರ ಕುರಿತು ದರ್ಶನ್ ಆಕ್ಷೇಪಾರ್ಹ ಮಾತುಗಳನ್ನಾಡಿರುವ ಆಡಿಯೋ ಮಂಡ್ಯ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ದರ್ಶನ್ ಅವರ ಮಾತುಗಳನ್ನು ಕೆಲವರು ಕೇಳಿರಬಹುದು. ಅದನ್ನು ಕೇಳಿದರೆ ಮಂಡ್ಯ ಮನೆ ಬಾಗಿಲಿಗೆ ಅವರು ಬರುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ನಡುವೆ ದರ್ಶನ್ ಅವರದು ಎನ್ನಲಾಗಿರುವ ಆಡಿಯೋ ವೈರಲ್ ಆಗಿರುವುದರ ಹಿಂದೆ ಮುಖ್ಯಮಂತ್ರಿಗಳ ಕೈವಾಡವಿದೆ ಎಂದು ಸುಮಲತಾ ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








