ಮೀರಸಾಬಿಹಳ್ಳಿ ರೈತರ ಅಳಲು : ಕಿಡಿಗೇಡಿಗಳ ಕೃತ್ಯ : 10 ಲಕ್ಷಕ್ಕೂ ಹೆಚ್ಚು ನಷ್ಟ

ಚಳ್ಳಕೆರೆ

       ತಾಲ್ಲೂಕಿನಾದ್ಯಂತ ಬರಗಾಲದ ದುಸ್ಥಿತಿಯಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ರೈತರು ತಮಗೆ ಇರುವ ಅಲ್ಪ ಪ್ರಮಾಣದ ನೀರಿನಿಂದ ಉತ್ತಮ ಬೆಳೆ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳುವ ಯತ್ನದಲ್ಲಿದ್ಧಾಗ ಗ್ರಾಮದ ಕೆಲವು ಕಿಡಿಗೇಡಿಗಳ ಕೃತ್ಯದಿಂದ ಕೈಗೆ ಬೆಳೆ ಸಿಗದೆ ಹೆಚ್ಚು ನಷ್ಟ ಅನುಭವಿಸಿದ ಘಟನೆ ಮೀರಸಾಬಿಹಳ್ಳಿ ಗ್ರಾಮದಿಂದ ವರದಿಯಾಗಿದೆ.

      ಮೀರಸಾಬಿಹಳ್ಳಿ ಗ್ರಾಮದ ರೈತರಾದ ಟಿ.ಎಚ್.ರಾಜಕುಮಾರ್ ಮತ್ತು ಟಿ.ಎಚ್.ವಿಜಯಕುಮಾರ್ ತಮ್ಮ ಗ್ರಾಮದಲ್ಲಿರುವ ತಮ್ಮದೇಯಾದ 6 ಎಕರೆ ಜಮೀನಲ್ಲಿ ಕರಬೂಜವನ್ನು ಬಿತ್ತಿದ್ದು, ಬೆಳೆ ಉತ್ತಮವಾಗಿದ್ದು, ಹೆಚ್ಚು ಲಾಭಗಳಿಸುವ ವಿಶ್ವಾಸದಲ್ಲಿದ್ದಾಗಲೇ ಕೆಲವು ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾಗಿ 10 ಲಕ್ಷಕ್ಕೂ ಹೆಚ್ಚು ನಷ್ಟವನ್ನು ಅನುಭವಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರೈತ ಟಿ.ಎಚ್.ರಾಜಕುಮಾರ್ ಮತ್ತು ಟಿ.ಎಚ್.ವಿಜಯಕುಮಾರ್, ಆರು ಎಕರೆ ಪ್ರದೇಶದಲ್ಲಿ ಕರಬೂಜ ಬಿತ್ತಿದ್ದು, ಬಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ, ದೊಡ್ಡ ಗಾತ್ರದ ಕರಬೂಜ ಹಣ್ಣು ಬಿಟ್ಟಿದ್ದು, ಪ್ರಾರಂಭದ ಹಂತದಲ್ಲಿ ಹೆಚ್ಚು ಲಾಭಗಳಿಸುವ ಆತ್ಮವಿಶ್ವಾಸವಿತ್ತು.

       ಕರಬೂಜ ಬೆಳೆ ಉತ್ತಮ ಪಡಿಸಲು ನೀರಿನ ಸೌಲಭ್ಯ ಹೆಚ್ಚು ಬೇಕಿದ್ದು, ಇತ್ತೀಚಿನ ದಿನಗಳಲ್ಲಿ ಬೋರ್‍ವೆಲ್‍ಗಳಲ್ಲಿ ನೀರು ಕಡಿತಗೊಂಡ ಹಿನ್ನೆಲೆಯಲ್ಲಿ ತಮ್ಮ ಬೆಳೆಗೆ ನೀರು ಉಣಿಸಲು ಡ್ರಂಗಳಲ್ಲಿ ನೀರು ದಾಸ್ತಾನು ಮಾಡಿ ಅವುಗಳನ್ನು ಹರಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಇದ್ದ ಕೆಲವು ಕಿಡಿಗೇಡಿಗಳು ದಾಸ್ತಾನಿದ್ದ ಡ್ರಂಗಳ ನೀರಿಗೆ ಕಳೆನಾಶಕವನ್ನು ಬೆರೆಸುವ ಮೂಲಕ ಕರಬೂಜ ಬೆಳೆ ಸಂಪೂರ್ಣವಾಗಿ ಬಳ್ಳಿಯಲ್ಲಿಯೇ ಒಣಗಿ ಹೋಗಲು ಕಾರಣರಾದರು.

       ನಮ್ಮ ಜಮೀನಿನ ಚಟುವಟಿಕೆಗಳನ್ನು ಗಮನಿಸಿದ್ದ ಯಾರೋ ಕೆಲವರು ಈ ಕೃತ್ಯವೆಸಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ತೋಟಗಾರಿಕೆ, ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

      ಮದ್ಯವ ವರ್ಗದ ರೈತರಾದ ನಮಗೆ ಕೇವಲ ಕೆಲವೇ ಎಕರೆ ಜಮೀನಿದ್ದು, ಜಮೀನಿನಿಂದ ಬರುವ ಆದಾಯವೇ ಬದುಕಿಗೆ ದಾರಿಯಾಗಿತ್ತು. ದುರುದ್ದೇಶದಿಂದ ನಷ್ಟ ಉಂಟು ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸರ್ಕಾರ ಹೆಚ್ಚಿನ ನಷ್ಟವನ್ನು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link