ಹೊಸಪೇಟೆ :
ಪ್ರಸಕ್ತ 2018-19ನೇ ಸಾಲಿನಲ್ಲಿ ವಿಕಾಸ್ ಬ್ಯಾಂಕ್ 8.85 ಕೋಟಿ ವ್ಯವಹಾರ ನಡೆಸಿದ್ದು, ಒಟ್ಟು 4.24 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ತಿಳಿಸಿದರು.
ಇಲ್ಲಿನ ವಿಕಾಸ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2019ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನ ವ್ಯವಹಾರ 401.49 ಕೋಟಿ ಗಡಿಯನ್ನು ದಾಟಿದೆ. ಠೇವಣಿಯಲ್ಲಿ ಶೇ.19.03ರ ವೃದ್ದಿಯನ್ನು ಸಾಧಿಸಿದೆ. ಸಾಲ ಮತ್ತು ಮುಂಗಡಗಳಲ್ಲಿ 2019 ಮಾರ್ಚ್ ಅಂತ್ಯಕ್ಕೆ 263.35 ಕೋಟಿ ಗಡಿಯನ್ನು ದಾಟಿ ಶೇ.31.55ರಷ್ಟು ಪ್ರಗತಿಯನ್ನು ಸಾಧಿಸಿದೆ. ಅದೇ ರೀತಿ ಒಟ್ಟು 664.85 ಕೋಟಿ ವ್ಯವಹಾರ ನಡೆಸಿ, ಶೇ.23.70ರಷ್ಟು ವೃದ್ದಿಯನ್ನು ಸಾಧಿಸಿದೆ ಎಂದು ಹೇಳಿದರು.
ಬ್ಯಾಂಕು ಎಲ್ಲಾ ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಆಪ್, ಐಎಂಪಿಎಸ್ ಸೇವೆಗಳು ಸೇರಿದಂತೆ ಎಲ್ಲಾ ಸೇವೆಗಳ್ನು ನೀಡುತ್ತಿದೆ. ಜೊತೆಗೆ ಡಿಜಿಟಲ್ ಬ್ಯಾಂಕಿಂಗ್ನಲ್ಲಿ ಗ್ರಾಹಕರಿಗೆ ಹಾನಿಯಾಗದಂತೆ ನಮ್ಮ ಎಟಿಎಂಗಳಲ್ಲಿ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ.
ಇದಲ್ಲದೇ ಮೊಬೈಲ್ ಆಪ್ ಮೂಲಕ ಎಟಿಎಂ ಲಾಕಿಂಗ್, ಅನ್ಲಾಕಿಂಗ್ ವ್ಯವಸ್ಥೆ ಕೂಡ ಗ್ರಾಹಕರಿಗೆ ನೀಡಲಾಗುತ್ತಿದೆ. 2021-22ರ ಬೆಳ್ಳಿ ಹಬ್ಬ ಮಹೋತ್ಸವ ಹೊತ್ತಿಗೆ ಒಟ್ಟು ರೂ.1000 ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಲಾಗಿದೆ ಎಂದರು. ಪತ್ರಿಕಾಗೋಷ್ಠಿ ಯಲ್ಲಿ ಬ್ಯಾಂಕಿನ ನಿರ್ದೇಶಕರಾದ ರಮೇಶ ಪುರೋಹಿತ, ಛಾಯಾ ದಿವಾಕರ್, ವೆಂಕಪ್ಪ, ವಿಠೋಬಪ್ಪ, ಗಂಗಮ್ಮ, ಸಲಹೆಗಾರ ಬಿ.ಜಿ.ಕುಲಕರ್ಣಿ, ಸಿಇಒ ಪ್ರಸನ್ನ ಹಿರೇಮಠ ಇದ್ದರು. ಅನಂತ ಜೋಶಿ ನಿರ್ವಹಿಸಿದರು.