ಬಳ್ಳಾರಿ
ಸಮುದಾಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈಜೋಡಿಸುವುದರ ಜೊತೆಗೆ ಸಾರ್ವಜನಿಕರು ಎಲ್ಲೆಂದರಲ್ಲಿ ಉಗುಳುವುದನ್ನು ತಡೆಯುವ ಮೂಲಕ ಹೆಚ್1 ಎನ್1 ಸೇರಿದಂತೆ ಕ್ಷಯರೋಗ ಮತ್ತು ಇತರೆ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಪಂ ಇವರ ಸಹಕಾರೊಂದಿಗೆ ಸೋಮವಾರ ಉತ್ತಂಗಿ ಬಸ್ ನಿಲ್ದಾಣ ಹಾಗೂ ಎಸ್ಸಿ ಕಾಲೋನಿಯಲ್ಲಿ ಹೆಚ್1 ಎನ್1 ರೋಗ ಕುರಿತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಗಿಗಳು ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕೈವಸ್ತ್ರ ಟಿಶ್ಯೂ ಹಾಳೆಯನ್ನು ಉಪಯೋಗಿಸಬೇಕು. ಕೈಗಳನ್ನು ಸಾಬೂನಿನಿಂದ ತೊಳೆದು ಆಹಾರ ಸೇವಿಸಬೇಕು. ವೈಯಕ್ತಿಕ ಸ್ವಚ್ಛತೆ ಪಾಲಿಸಿ, ಸ್ನಾನ ಮಾಡಿ ಶುಭ್ರ ಬಟ್ಟಿ ಧರಿಸಬೇಕು. ಸೋಂಕು ಇದ್ದಲ್ಲಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರಬೇಕು. ಚಿಕ್ಕ ಮಕ್ಕಳಿದ್ದರೆ ಅವರನ್ನು ರೋಗಿಯಿಂದ ದೂರವಿಡಬೇಕು ಸೋಂಕು ಇದ್ದಲ್ಲಿ ವಿಶ್ರಾಂತಿ ಪಡೆಯಿರಿ. ಒತ್ತಡವನ್ನು ನಿಭಾಯಿಸಿ, ಪೌಷ್ಠಿಕ ಆಹಾರ ಸೇವಿಸಬೇಕು. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು ಎಂದರು.
ವೈದ್ಯಾಧಿಕಾರಿ ಡಾ.ಉಮೇಶ.ಜೆ ಅವರು ಮಾತನಾಡಿ ಹೆಚ್1ಎನ್1 ರೋಗವು ಬಂದಾಗ ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಚಳಿಯೂ ಇದ್ದು ದೇಹ ಬಳಲುತ್ತದೆ. ಉಸಿರಾಟದಲ್ಲಿ ತೊಂದರೆ ಕಾಣಿಸಿಬಹುದು, ಕೆಲವೊಮ್ಮೆ ವಾಂತಿ ಮತ್ತು ಬೇದಿಯೂ ಆಗಬಹುದು ಈ ಲಕ್ಷಣಗಳು ಕಂಡು ಬಂದಲ್ಲಿ ತಡ ಮಾಡದೆ ವೈದ್ಯರ ಚಿಕಿತ್ಸೆಯನ್ನು ಪಡೆಯಬೇಕು ಎಂದರು.
ವೈದ್ಯಾಧಿಕಾರಿ ಡಾ. ವಿನೋದ.ಎಲ್ ಅವರು ಮಾತನಾಡಿದರು.
ಈ ಸಂಧರ್ಭದಲ್ಲಿ ವೈದ್ಯಾಧಿಕಾರಿ ಡಾ.ಚಂದ್ರಶೇಖರ ನಾಯ್ಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾ ನಾಯ್ಕ್, ಟಿ.ಪ್ರೊಜಕ್ಟನಿಸ್ಟ್ ನರಸಿಂಹಮೂರ್ತಿ ಎಂ.ಎಲ್.ಹೆಚ್.ಪಿ ಹರ್ಷಿತಾ, ಮಂಜುಶ್ರೀ ನಾಯ್ಕ್, ಕಿರಿಯ ಆರೋಗ್ಯ ಸಹಾಯಕರಾದ ಅಶ್ವಿನಿ ಎ, ಕಲ್ಪನಾ, ರೂಪಿಣಿ, ಎಮ್.ಜಿ ಬಂಡಾರಿ, ಕಾರ್ತಿಕ, ಸುಭಾಷ್, ಗಿರಿಜಮ್ಮ, ಮಂಜುಳಾ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ