ಉಗ್ರಪ್ಪ ಪರ ಆನಂದಸಿಂಗ್ ಪಾದಯಾತ್ರೆ ಮೂಲಕ ಪ್ರಚಾರ.

ಹೊಸಪೇಟೆ :

       ವಿಜಯನಗರ ವಿಧಾನಸಭಾ ಕ್ಷೇತ್ರದ ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಬಳ್ಳಾರಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಮತಯಾಚನೆ ಮಾಡಲಾಯಿತು.

       ಶಾಸಕ ಆನಂದಸಿಂಗ್ ಬೆಳಿಗ್ಗೆ ವಡಕರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮತಯಾಚನೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದ್ದ ಅನೇಕ ಜನಪರ ಕಾರ್ಯಕ್ರಮಗಳನ್ನು ಜನ ಕೊಂಡಾಡುತ್ತಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ, ವಿದ್ಯಾಸಿರಿ, ಪಶುಭಾಗ್ಯ, ಕೃಷಿಭಾಗ್ಯ ಹೀಗೆ ನೂರಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.

      ಈಗಿರುವ ಸಮ್ಮಿಶ್ರ ಸರ್ಕಾರವೂ ಕೂಡ ರೈತರ ಸಾಲಮನ್ನಾ ಮಾಡುತ್ತಿದೆ. ಇಂಥ ಒಂದೇ ಒಂದು ಯೋಜನೆಯನ್ನು ಬಿಜೆಪಿಯವರು ಕೊಟ್ಟಿಲ್ಲ. ಬರೀ ಸುಳ್ಳು ಹೇಳಿಕೊಂಡು ತಿರುಗೋದೆ ಅವರ ನಿತ್ಯದ ಕಾಯಕವಾಗಿದೆ ಎಂದು ವ್ಯಂಗ್ಯವಾಡಿದರು.

      ಬಳಿಕ ವಡಕರಾಯ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆಯು ನಗರದ ಮೇನ್ ಬಜಾರ್, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ, ರೋಟರಿ ವೃತ್ತ, ತಾಲೂಕು ಕಚೇರಿ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡಿತು. ಬಳಿಕ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪಾದಯಾತ್ರೆಯು ಮುಂದುವರೆಯಿತು.

        ಈ ಸಂಧರ್ಭದಲ್ಲಿ ಮಾಜಿ ಶಾಸಕ ರತನಸಿಂಗ್, ಮುಖಂಡರಾದ ಅಬ್ದುಲ್ ವಹಾಬ್, ಜಿ.ಪಂ.ಸದಸ್ಯ ಪ್ರವೀಣಸಿಂಗ್, ಸಂದೀಪ ಸಿಂಗ್ , ಗುಜ್ಜಲ ನಾಗರಾಜ, ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಸಿದ್ದನಗೌಡ, ಇಮಾಮ್ ನಿಯಾಜಿ, ಕವಿತಾಸಿಂಗ್, ಭಾಗ್ಯಲಕ್ಷ್ಮಿ ಭರಾಡೆ, ಸಿದ್ದಾರ್ಥಸಿಂಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ, ತಾ.ಪಂ.ಸದಸ್ಯ ಪಾಲಪ್ಪ, ನಿಂಬಗಲ್ ರಾಮಕೃಷ್ಣ, ಶೇಷು, ರಾಮಚಂದ್ರ, ಎನ್.ವೆಂಕಟೇಶ್, ಅಯ್ಯಾಳಿ ನವೀನಕುಮಾರ್, ಗುಜ್ಜಲ ಹನುಮೇಶ, ಮಧುರ ಚೆನ್ನಶಾಸ್ತ್ರಿ, ನಗರಸಭಾ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ