ನರೇಂದ್ರಮೋದಿ ಭಾವನಾತ್ಮಕ ಪ್ರಚೋದನೆಯಿಂದ ದೇಶದ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ಧಾರೆ: ಟಿ.ರಘುಮೂರ್ತಿ ಆರೋಪ

ಚಳ್ಳಕೆರೆ

           ಕಳೆದ ಐದು ವರ್ಷಗಳಿಂದ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರಮೋದಿ ಸುಳ್ಳು ಪೊಳ್ಳು ಭರವಸೆಯ ಮೂಲಕ ಜನರನ್ನು ಭಾವನಾತ್ಮಕವಾಗಿ ಪ್ರಚೋದನೆ ನೀಡುತ್ತಾ, ಜನರನ್ನು ಮರಳು ಮಾಡಿದ್ದಾರೆ ವಿನಃ ಯಾವುದೇ ರೀತಿಯ ಪ್ರಗತಿಪರ ಕಾರ್ಯಗಳು ನಡೆದಿಲ್ಲವೆಂದು ಕ್ಷೇತ್ರದ ಶಾಸಕರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿಗಳಾದ ಟಿ.ರಘುಮೂರ್ತಿ ಆರೋಪಿಸಿದ್ದಾರೆ.

         ಅವರು, ಸೋಮವಾರ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಸಬಾ ಹೋಬಳಿಯ ಕಾರ್ಯಕರ್ತರ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

          ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಸಿದ್ದರಾಮಯ್ಯ ಮುಂತಾದ ಮಾರ್ಗದರ್ಶನದಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗಳಾಗಿ ಚುನಾವಣೆ ಎದುರಿಸುತ್ತಿದ್ದು, ಪ್ರಸ್ತುತ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿ, ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಲಕ್ಷಾಂತರ ಮತಗಳಿಂದ ಎರಡನೇ ಬಾರಿಗೆ ಪುನರಾಯ್ಕೆಯಾಗುವರು.

          ಈಗಾಗಲೇ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಚಂದ್ರಪ್ಪನವರ ಗೆಲುವಿಗಾಗಿ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು, ಇದು ಚಂದ್ರಪ್ಪನವರಿಗೆ ಐತಿಹಾಸಿಕ ಗೆಲುವಾಗಿ ಪರಿಣಮಿಸಲಿದೆ. ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷದೊಂದಿಗೆ ಸೌಹಾರ್ಧಿತ ಹೊಂದಾಣಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು. ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಿದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗಿ ದೇಶದ ಆಡಳಿತವನ್ನು ನಡೆಸುವರು ಎಂದರು.

          ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ರಾಜ್ಯದ ಸರಳ, ಸಜ್ಜನ ಸಂಸದರಲ್ಲಿ ಬಿ.ಎನ್.ಚಂದ್ರಪ್ಪ ಮೊದಲಿಗರಾಗಿದ್ದು, ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಹಣಕಾಸು ನೆರವು ಸೇರಿದಂತೆ ಅವರ ಹುಟ್ಟೂರು ಲಕ್ಕವಳ್ಳಿ ಭಾಗದ ಜನರ ಮನವಲಿಸಿ ಈ ಯೋಜನೆ ಜಾರಿಗೆ ಸಹಕಾರ ನೀಡಿದ್ಧಾರೆ. ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದಾರೆ. ಕ್ಷೇತ್ರದ ಜನತೆ ಈಗಾಗಲೇ ಒಂದು ಲಕ್ಷ ಮತಗಳ ಅಂತರದಿಂದ ಚಂದ್ರಪ್ಪನವರನ್ನು ಗೆಲ್ಲಿಸುವ ವಿಶ್ವಾಸವನ್ನು ಹೊಂದಿದ್ದಾರೆ. ಆದರೆ, ಜಿಲ್ಲೆಯ ಬಿಜೆಪಿ ಅಧ್ಯಕ್ಷರು ಮಾತ್ರ ಸಂಸದರು ಏನೂ ಕೊಡಿಗೆ ನೀಡಿಲ್ಲವೆಂದು ಸುಳ್ಳು ಪ್ರಚಾರ ಮಾಡುತ್ತಿದ್ಧಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರ ಶ್ರಮವೇ ಮೂಲಮಂತ್ರವಾಗಿದೆ ಎಂದರು.

        ಸಂಸದ, ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಕಳೆದ ಐದು ವರ್ಷಗಳ ನನ್ನ ಕಾರ್ಯ ಪಕ್ಷಕ್ಕೆ ತೃಪ್ತಿ ತಂದಿದ್ದು, ಮತ್ತೊಮ್ಮೆ ಯಾವುದೇ ರೀತಿಯ ತಕರಾರು ಇಲ್ಲದೆ ನನಗೆ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದೆ. ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಪ್ರಬಲವಾಗಿದ್ದು, ಈ ಬಾರಿಯ ಗೆಲುವು ಸಾಧಿಸಲು ನಮಗೆ ಇದು ಹೆಚ್ಚು ಸಹಕಾರಿಯಾಗಿದೆ ಎಂದರು.

         ಜೆಡಿಎಸ್ ಪರಾಜಿತ ಅಭ್ಯರ್ಥಿ ಎನ್.ರವೀಶ್‍ಕುಮಾರ್ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಾರ್ಗದರ್ಶನದಲ್ಲಿ ಪಕ್ಷ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಗೆಲುವಿಗೆ ಸಂಪೂರ್ಣ ಸಹಕಾರ ನೀಡಲಿದೆ. ಈಗಾಗಲೇ ಪಕ್ಷದ ಎಲ್ಲಾ ಹಂತದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಯಾವುದೇ ಹಂತದಲ್ಲೂ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರ ಪಡೆಯದಂತೆ ದೂರವಿಡುವ ಪ್ರಯತ್ನ ನಿರಂತರ ಸಾಗಿದೆ ಎಂದರು.

         ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಪಕ್ಷದ ಗೆಲುವಿಗೆ ಬೂತ್ ಮಟ್ಟದ ಕಾರ್ಯಕರ್ತರೇ ಪ್ರಮುಖವಾಗಿದ್ದು, ಈಗಾಗಲೇ ಜೆಡಿಎಸ್ ಘಟಕದ ವತಿಯಿಂದ ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರಿಗೆ ಚಂದ್ರಪ್ಪನವರ ಗೆಲುವಿಗೆ ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಲೀಡನ್ನು ಚಂದ್ರಪ್ಪ ಪಡೆಯಲಿದ್ಧಾರೆ. ಕಾರಣ, ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದು, ಮತಗಳ ವಿಭಜನೆ ತಪ್ಪಿಸಿದಂತಾಗಿದೆ ಎಂದರು.

         ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಫ್ಯಾತರಾಜನ್, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಮೈಲಾರಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ವೆಂಕಟೇಶ್‍ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಂಜಿತಾ, ಆಂಜನೇಯ, ಟಿ.ಗಿರಿಯಪ್ಪ, ನಗರಸಭಾ ಸದಸ್ಯರಾದ ಕೆ.ಸಿ.ನಾಗರಾಜ, ವಿ.ವೈ.ಪ್ರಮೋದ್, ಸಿ.ಶ್ರೀನಿವಾಸ್, ರಮೇಶ್‍ಗೌಡ, ಮಲ್ಲಿಕಾರ್ಜುನ, ಎಂ.ಜೆ.ರಾಘವೇಂದ್ರ, ವಿರೂಪಾಕ್ಷ, ವೈ.ಪ್ರಕಾಶ್, ಸುಮಭರಮಣ್ಣ, ಕವಿತಾಬೋರಯ್ಯ, ಸುಜಾತ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link