ತಾಲ್ಲೂಕಿನ ಹಲವು ಭಾಗಗಳಲ್ಲಿ ಸಿದ್ದಗಂಗಾ ಶ್ರೀಗಳ ಜನ್ಮ ದಿನ ಆಚರಣೆ..!!

ಗುಬ್ಬಿ

       ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 112 ನೇ ಹುಟ್ಟು ಹಬ್ಬವನ್ನು ತಾಲ್ಲೂಕಿನ ಹಲವು ಭಾಗಗಳಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜೆ, ದಾಸೋಹ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

       ತಾಲ್ಲೂಕಿನ ನಿಟ್ಟೂರು, ಹೊಸಕೆರೆ, ಗುಬ್ಬಿ ಪಟ್ಟಣ, ಚೇಳೂರು ಸೇರಿದಂತೆ ಹಲವು ಭಾಗದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಶ್ರೀಸಿದ್ದರಾಮಸೇನೆ ವತಿಯಿಂದ ಸ್ವಾಮೀಜಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾಗವಹಿಸಿದ್ದ ಭಕ್ತಾದಿಗಳಿಗೆ ದಾಸೋಹವನ್ನು ಏರ್ಪಡಿಸಲಾಗಿತ್ತು.
ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರ ಸ್ವಾಮೀಜಿಗಳು ಪೂಜಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಈ ದಿನವನ್ನು ರಾಷ್ಟ್ರವ್ಯಾಪ್ತಿ ದಾಸೋಹದ ದಿನವನ್ನಾಗಿ ಮಾಡಿದಾಗ ಅವರ ಸೇವೆ ನಿಜವಾಗಿ ದೇವರಿಗೆ ಮುಟ್ಟುತ್ತದೆ. ಶ್ರೀಗಳು ತ್ರಿವಿಧ ದಾಸೋಹಿಗಳಾಗಿ ತಮ್ಮ ಕೊನೆಯ ಕಾಲದಲ್ಲಿಯೂ ಸಹ ಸಮಾಜ ಸೇವೆಯನ್ನು ಮಾಡುತ್ತಲೆ ಬಂದವರು, ಅವರ ಕಾಲಘಟ್ಟದಲ್ಲಿ ನಾವು ಇರುವುದು ನಮ್ಮ ಪುಣ್ಯ ಎಂದು ತಿಳಿಸಿದರು.

       ಸಿದ್ದರಾಮ ಸೇನೆಯ ಅಧ್ಯಕ್ಷ ಹೇಮಂತ್ ಮಾತನಾಡಿ, ಶ್ರೀಗಳು ಸದಾಕಾಲ ನಮ್ಮೊಟ್ಟಿಗೆ ಇದ್ದು ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಅವರು ಮಾಡಿರುವ ಅಪಾರವಾದ ಸೇವೆ ನಮಗೆ ಸ್ಪೂರ್ತಿಯಾಗಿದ್ದು ಇಳಿಯ ವಯಸ್ಸಿನಲ್ಲಿಯೂ ಸಹ ಸಾಮಾಜಿಕ ಸೇವೆಯನ್ನು ಮಾಡುತ್ತ ಬಂದಂತಹ ನಡೆದಾಡುವ ದೇವರು ನಾವು ದೇವರನ್ನು ಕಂಡಿಲ್ಲ ಆದರೆ ಅವರೆ ನಮಗೆ ದೇವರಾಗಿದ್ದರು ಎಂದು ತಿಳಿಸಿದರು.

         ಸದಸ್ಯ ನಿತ್ಯಾನಂದ ಮಾತನಾಡಿ, ಶ್ರೀಗಳು ಜಾತ್ಯತೀತವಾಗಿ ಎಲ್ಲಾ ಸಮುದಾಯದ ಲಕ್ಷಾಂತರ ಮಕ್ಕಳಿಗೆ ವಿದ್ಯೆ ಊಟ ವಸತಿ ನೀಡುವ ಮೂಲಕ ಇಡಿ ತುಮಕೂರನ್ನೆ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದ ಮಹಾ ಕಾಯಕ ಯೋಗಿ. ತುಮಕೂರು ಎಂದರೆ ದಾಸೋಹದ ಜಿಲ್ಲೆ ಅನ್ನುವ ಮಟ್ಟಕ್ಕೆ ತೆಗೆದುಕೊಂಡು ಹೋದ ಆಧುನಿಕ ಬಸವೇಶ್ವರರು ನಾವು ಬದುಕಿರುವವರೆಗೂ ಅವರ ಸೇವೆಯನ್ನು ನೆನೆದು ಜೀವನ ಮಾಡಬೇಕು ಎಂದು ತಿಳಿಸಿದರು.

          ಇದೇ ಸಂದರ್ಭದಲ್ಲಿ ಸದಸ್ಯರಾದ ಸತೀಶ್, ನಿರಂಜನ್, ನಟರಾಜು, ಅನಿಲ್, ಉದಯ, ಲೋಹಿತ್, ಹೇಮಂತ್, ಸಂತೋಷ್, ಮಲ್ಲಿಕಾರ್ಜುನ, ರಮೇಶ್, ರವಿ, ಸತೀಶ್ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link